Sunday, November 13, 2011

…… ರೆ
ಸುತ್ತೆಲ್ಲ ಮಂದಿ ಮತಿಹೀನರಾಗುತ್ತ ಅದರ ತಪ್ಪ
ನಿನ್ನಮೇಲೆ ಹೇರಿದೊಡೆಯೂ, ಮತಿ ನಿನ್ನ ವಶದಲ್ಲಿರೆ;
ಜಗದ ಅವಿಶ್ವಾಸದೆದುರು ನೀ ವಿಶ್ವಾಸಹೀನನಾಗದಿರೆ,
ಆ ಅವಿಶ್ವಾಸಕ್ಕೆ ತಾಳ್ಮೆದೋರಬಲ್ಲೆಯಾದರೆ;
ಕಾಯಬಲ್ಲವನಾಗಿ, ಕಾದು ದಣಿಯಲೊಲ್ಲೆಯಾದರೆ,
ನಿನ್ನ ಬಗ್ಗೆ ಸುಳ್ಳುಗಳ ಹೇಳಿದರೂ ಸುಳ್ಳಾಡವೊಲ್ಲೆಯಾದರೆ,
ದ್ವೇಶಿಸಲ್ಪಟ್ಟರೂ ದ್ವೇಶಕ್ಕೆ ನೀ ಎಡೆಗೊಡದಿದ್ದರೆ,
ಇಷ್ಟಾಗಿ, ನೀ ಮೆರೆಯದಿರೆ, ಬಲ್ಲವನಂತೆ ಮಾತನಾಡದಿರೆ;

ಕನಸ ಕಾಣಬಲ್ಲವನಾಗಿಯೂ ಕನಸು ನಿನ್ನ ಯಜಮಾನನಾಗದಿರೆ;
ಆಲೋಚನಾಪರನಾಗಿ, ಆಲೋಚನೆಗಳೇ ನಿನ್ನ ಗುರಿಯಾಗದಿರೆ;
ವಿಜಯ ವಿಪತ್ತುಗಳನ್ನು ಎದುರಿಸಿ
ಅವೆರಡೂ ವಂಚಕರು ಒಬ್ಬನೇ ಎಂಬಂತೆ ನೀ ಕಂಡರೆ;
ನೀನುಲಿದ ಸತ್ಯಗಳ ತಿರುಚಿ, ನೀಚರು
ಮರುಳರಿಗೆ ಉರುಳುಮಾಡುವುದ ನೀ ಸಹಿಸಬಲ್ಲೆಯಾದರೆ,
ನೀ ಜೀವ ತೇಯ್ದು ಕಟ್ಟಿದ್ದು ಮುರಿದುಬಿದ್ದುದ ನೋಡಿ
ಮತ್ತೆ ಕಟ್ಟಲು ಸವಕಲು ಸಾಧನಗಳನೆತ್ತ ಬಲ್ಲೆಯಾದರೆ;

ನೀನು ಗೆದ್ದುದನೆಲ್ಲ ಗುಡ್ಡೆಹಾಕಿ
ದಾಳದ ಕುಣಿತಕ್ಕೆ ಪಣವೊಡ್ಡಿ,
ಸೋತು, ಮತ್ತೆ ಮೂಲದಿಂದ ಪ್ರಾರಂಭಿಸಿ
ನಿನ್ನ ಸೋಲಿನ ಬಗ್ಗೆ ಸೊಲ್ಲೆತ್ತಲೊಲ್ಲೆಯಾದರೆ;
ನಿನ್ನೆದೆ ನರ ನಾಡಿಗಳಳಿದ ಮೇಲೂ ನಿನ್ನ
ಕರ್ತವ್ಯಗಳಿಗವನ್ನು ಒತ್ತಾಯಿಸಿ
ಅವಕೆ ತಡೆ ಎಂದಾಜ್ಞಾಪಿಸುವ ಸಂಕಲ್ಪವಲ್ಲದೆ
ನಿನ್ನಲ್ಲೇನೂ ಉಳಿದಿಲ್ಲದಾಗ್ಯೂ ಕೈಬಿಡಲಾರೆಯಾದರೆ;

ಮಂದಿಯೊಡನೆ ಮಾತಾಡಿಯೂ ನಿನ್ನ ಸದ್ಗುಣವ ಕಾಪಾಡಬಲ್ಲೆಯಾದರೆ,
ರಾಜರೊಡನಾಟದಲ್ಲೂ ಸಾಮಾನ್ಯರ ಸಂಪರ್ಕವ ಬಿಡಲೊಲ್ಲೆಯಾದರೆ;
ಶತ್ರುವೂ ಪ್ರಿಯಮಿತ್ರನೂ ನಿನ್ನ ನೋಯಿಸಲಾರರಾದರೆ;
ಪ್ರತಿಯೋರ್ವರೂ ಗಣ್ಯರಾಗಿ, ಆದರೆ ಒಬ್ಬರೂ ಬಹಳವಾಗಲ್ಲದಿದ್ದರೆ,
ನಿಷ್ಕರುಣಿ ನಿಮಿಷದಲಿ ಅರವತ್ತು
ಕ್ಷಣಗಳ ಓಟವ ತುಂಬಬಲ್ಲೆಯಾದರೆ -
ನಿನ್ನದೀ ಭುವಿ ಮತ್ತದರೊಳಗಣದೆಲ್ಲ,
ಅದ ಮೀರಿ, ಮಗು, ನೀ ಮನುಷ್ಯನಾಗುವೆ ದಿಟ!

ಇದು ರಡ್ಯಾರ್ಡ್ ಕಿಪ್ಲಿಂಗ್ ಅವರ If ಎಂಬ ಪದ್ಯದ ಭಾಷಾಂತರ.

This is the Kannada translation of Rudyard Kipling's poem "If"
If you cannot read the text in Kannada above, please click on the image below to get an enlarged image,
No comments: