Tuesday, October 19, 2010

ಪ್ರಭ ನಾರಾಯಣನ್ ಅವರ ಚಿತ್ರಕಲಾ ಪ್ರದರ್ಶನ

ಪೆನ್ಸಿಲ್ ಜಾಮ್ ಎಂಬ ಚಿತ್ರಕಾರರ ಒಕ್ಕೂಟ ಒಂದರ ಸದಸ್ಯ ನಾನು. ಅದರ ಇನ್ನೊಬ್ಬ ಸದಸ್ಯೆ ಪ್ರಭ ನಾರಾಯಣನ್ ಅವರ ಚಿತ್ರಕಲೆಯ ಪ್ರದರ್ಶನ ನಾಳೆಯಿಂದ ಚಿತ್ರಕಲಾ ಪರಿಷತ್ತಿನಲ್ಲಿ ಆರಂಭವಾಗಲಿದೆ. ಕರೆಯೋಲೆ ಇಲ್ಲಿದೆ.

ನಾನು ಅವರ ಕಲೆಯ ಅಭಿಮಾನಿ. ನೀವು ಅದನ್ನು ನೋಡಿದರೆ ನೀವೂ ಅದರ ಅಭಿಮಾನಿಯಗುತ್ತೀರಾ ಎಂಬ ಭರವಸೆ ನನಗಿದೆ. ಖಂಡಿತ ಬನ್ನಿ.






Wednesday, October 13, 2010

ಚಿಂತಿಸದಿರು ರೋಹಿಂಟನ್





ಪುಸ್ತಕವ ಸುಟ್ಟರೆ ಏರುವುದು ಬರಿಯ ಹೊಗೆಯಲ್ಲ,
ಅದರೊಳಗಣ ಸತ್ಯವದು, ಹರಡುವುದು ಜಗದ ಉದ್ದಗಲ,
ಬೀಳುವುದು ಅದರ ಬೂದಿಯಲ್ಲ, ಸುಟ್ಟ ಸಮಾಜದ
ಕರಕಲು ಭಸ್ಮವದು ಎಂದ ಓಮಾರ








Monday, August 2, 2010

ಮೈಮಾಟ



ಕ್ವಿಂಟಾಲ್ ತೂಕದ ಮೂಟೆಗಳ ಹೊತ್ತು ಮಂಡಿಪೇಟೆಯಲ್ಲಿ
ಇಳಿಜಾರಿನ ಮೇಲೆ ಏರಿಳಿಯುವ ಕಷ್ಟಜೀವಿಯ ಮೈಮಾಟವು
ಜಿಮ್‍ನಲ್ಲಿ ಯಂತ್ರಗಳ ಮೇಲೆ ವೃಥಾ ಕಸರತ್ತು ಮಾಡಿ ಕೆತ್ತಿದ
ಸುಖಜೀವಿಯ ಮೈಮಾಟಕ್ಕೆ ಮಿಗಿಲಾಗಿ ಕಂಡಿತು ಓಮಾರನಿಗೆ






Saturday, July 31, 2010

ಆರಾಧನೆ




ದೇವವಿದ್ದು, ಈ ವಿಶ್ವವದರ ಸೃಷ್ಟಿಯೇ ಆದೊಡೆ
ಆ ದೇವವನಾರಾಧಿಸಲು ಬಾಲಿಶ ಕಟ್ಟುಕತೆಗಳ ಬದಲು
ಜೀವ- ಭೌತ- ಶಾಸ್ತ್ರಗಳನೋದಿ
ಅಚ್ಚರಿಗೊಳ್ಳುವುದೆ ಮೇಲೆನಿಸಿತು ಓಮಾರನಿಗೆ.



Saturday, June 5, 2010

ನಿದ್ರೆ


ಜೀವನ ಕಲಿಸಿದ ಪಾಠಗಳ ನೆನಪಿನಲ್ಲುಳಿಸಿ
ಕೋಪ, ದ್ವೇಷ, ದುಃಖ, ನೋವುಗಳ ಅಳಿಸಿ
ಹೊಸ ದಿನದ ಹೊಸ ಹಾಳೆಯ ಬಿಡಿಸಿ
ಏಳೆಲೆಂದೇ ನಿದ್ರೆಯೆ? ಕೇಳಿದನಜ್ಞಾನಿ ಓಮಾರ





ಮಕ್ಕಳು

ನಿನ್ನ ಮಕ್ಕಳು ನಿನ್ನವಲ್ಲ
ಜೀವಕ್ಕಿರುವ ಜೀವದಾಸೆಯ ಮಕ್ಕಳವು
ನಿನ್ನೊಳಗಿಂದ ಬರುವವಷ್ಟೆ ನಿನ್ನವಲ್ಲ
ನಿನ್ನೊಡನಿದ್ದೂ ನಿನ್ನವಲ್ಲವವು
ನಿನ್ನ ಪ್ರೀತಿಯನಷ್ಟೆ ಅವಕ್ಕೆ ಕೊಡಲುಂಟಷ್ಟೆ, ನಿನ್ನ ಚಿಂತನೆಗಳನಲ್ಲ
ಅವಕ್ಕುಂಟು ಸ್ವಂತ ಚಿಂತನೆ
ಅವರ ತನುವಿಗಷ್ಟೆ ನಿನ್ನ ಮನೆ, ಮನಕಲ್ಲ
ನೀ ಕನಸಲೂ ಹೊಗಲಾರದ ನಾಳೆಯೇ ಅವರ ಮನೆ
ಅವರಂತಾಗಲು ಹೆಣಗು, ನಿನ್ನಂತೆ ಅವರನಾಗಿಸಲಲ್ಲ
ಹಿನ್ನಡಿಯದು ಜೀವ, ತೊಳಲದು ನೆನ್ನೆಯಲಿ
ಜೀವಂತ ಬಾಣಗಳವೊಲು ಮಕ್ಕಳ ಚಿಮ್ಮಿಸುವ ಬಿಲ್ಲು ನೀನು
ಬಿಲ್ಗಾರ ಕಾಣುವನು ಅನಂತದ ಹಾದಿಯ ಮೇಲಿನ ಗುರಿಯ
ಬಗ್ಗಿಸುವನು ನಿನ್ನವನ ಬಲದಿಂದೆ ಅವನ ಬಾಣವತಿದೂರ ತ್ವರದಿ ಸಾಗಲೆಂ
ಬಾಗು ಸಂತಸದಿ ಬಿಲ್ಗಾರನ ಕೈಯೊಳು
ಚಿಮ್ಮುವ ಬಾಣವಷ್ಟೇ ಪ್ರಿಯವಲ್ಲವವಗೆ
ಪ್ರೀತಿಸುವನವನು ಸ್ಥಿರವಿರುವ ಬಿಲ್ಲಕೂಡ





ಖಲೀಲ್ ಗಿಬ್ರಾನನ "On Children" ಎಂಬ ಪದ್ಯದ ಕನ್ನಡ ರೂಪ
ಅ ಪದ್ಯವನ್ನು ಯಾರಾದರೂ ಕನ್ನಡಕ್ಕೆ ಭಾಶಾಂತರಿಸಿದ್ದಾರೋ ಇಲ್ಲವೂ ನನಗೆ ಗೊತ್ತಿಲ್ಲ. ಅಂತಹ ಭಾಷಾಂತರ ಇದ್ದಲ್ಲಿ, ನನ್ನ ಪ್ರಯತ್ನಕ್ಕೂ ಅದಕ್ಕೂ ಹೋಲಿಕೆ ಇದ್ದಲ್ಲಿ ಅದು ಖಂಡಿತ ಆಕಸ್ಮಿಕ. ನಿಮಗೆ ಗೊತ್ತಿದ್ದಲ್ಲಿ ದಯವಿಟ್ಟು ನನಗೆ ತಿಳಿಸಿ.


(This is a translation of Khalil (Kahlil) Gibran's poem "On Children". If there is any similarity to any other translation of this poem, it is completely accidental. Do please let me know if you know of any other translation.)

Monday, May 10, 2010

ಮಿದುಳ ಮಡಿ (Brain Wash)




ರೇಶಿಮೆಯ ಮಡಿಯುಟ್ಟ ಮುಗ್ಧ ಮುದ್ರಾಧಾರಿಯು
ಗೋಡೆಯಾಚೆಯ ಗೆಳೆಯನ ಕೈಯ ಪಾಪ್ಕಾರ್ನಿಗೆ
ಬಾಯೊಡ್ಡಿದುದ ಕಂಡು, ಈರ್ವರು ಬೆಳೆದಂತೆ
ಗೋಡೆಯೂ ಬೆಳೆವುದನೂಹಿಸಿದ ಓಮಾ














Tuesday, May 4, 2010

ಹೊಸ ಅಫೀಮು



ಧರ್ಮ ಮಂದಿಗಫೀಮೆಂದ ಮಾರ್ಕ್ಸ್.
ಅದು ದುರ್ಬಲವಾದೊಡೆ ಕೈಗಾವಲಿಗಿರಲೆಂದು
ಫುಟ್ಬಾಲ್, ಸಿನಿಮ, ಟೀವಿ, ಐಪಿಎಲ್‍ಗಳನು
ಹಣವಂತರು ಸೃಷ್ಟಿಸಿರಬೇಕೆಂದ ಓಮಾರ



Sunday, May 2, 2010

ನಾನು - ಜೀನು



"ನಾನು" ಜೀನುಗಳ ಉಳಿವಿಗೆಂದಾದ
ಅನೇಕ ಚೇಷ್ಟೆಗಳಲ್ಲೊಂದರ ಅನಿರೀಕ್ಷಿತ ಪರಿಣಾಮ ಎಂದು,
ನಾ ಬಂದೆನೆಲ್ಲಿಂದ, ಹೋಗುವೆನೆಲ್ಲೆಗೆ? ಎಂಬ
ಘನಪ್ರಶ್ನೆಯ ಬಲೂನಿಗೆ ಸೂಜಿ ಚುಚ್ಚಿದ, ಕುಹಕಿ ಓಮಾರ






Sunday, April 25, 2010

ದುರಾಸೆ




ಕಂಡ ಕಂಡ ಕಾವಿಚಾಟಿಗೆ ತಲೆಬಾಗಿ
ಢಂಬ ವಾಚಾಳಿತನಕ್ಕೆ ತಲೆದೂಗಿ
ಮಾನಗೆಟ್ಟ ಮಾನವರ ಮೌಢ್ಯಕ್ಕೆ
ಮರುಗಿದನಾ ಓಮಾರ




ಕಠಿಣ ನಂಬಿಕೆ




ಹುಟ್ಟು ಕುರುಡನ ಮೂತ್ರಪಿಂಡವು ಕೆಟ್ಟು ಹೋಗಿ
ಅಜ್ಜಿಯು ತನ್ನದೊಂದ ದಾನವಿತ್ತುದ ನೋಡಿ
ದೇವರ ಕರುಣೆಯನು ಹೊಗಳಿದವರ
ನಿಷ್ಕರುಣೆಯ ತೆಗಳಿದ ಓಮಾ



Monday, April 12, 2010

ಬಹ್ವಿಶ್ವ

ಭೌತಶಾಸ್ತ್ರದ ಬಹ್ವಿಶ್ವದ ಕಲ್ಪನೆಯನೋದಿ
ಈ ವಿಶ್ವದಲಿ ಕೈತಪ್ಪಿದ ಮಾಣಿಕ್ಯವು
ಯಾವುದೋ ವಿಶ್ವದಲಿ ಕೈಗೂಡಿದುದನು
ಊಹಿಸಿ ನಿಧಿ ಸಿಕ್ಕಂತೆ ಹಿಗ್ಗಿದನೋಮಾರ





ಬಹ್ವಿಶ್ವ is the coined kannada word for multiverse.