Friday, October 3, 2014

ಹೀಗೊಂದು ಪ್ರಶಸ್ತಿಪ್ರದಾನ ಸಮಾರಂಭ



ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ  ಇಂದು (೧೨-೦೯-೨೦೧೪) ವಿವಿಧ ದತ್ತಿಗಳ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. 

ಕರ್ನಾಟಕದ ವಿವಿಧ ಭಾಗಗಳಿಂದ ಬಂದ ಸುಮಾರು ಹದಿನೈದು ಇಪ್ಪತ್ತು ಲೇಖಕರಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. 

ಬೆಳಿಗ್ಗೆ ೧೧ ಘಂಟೆಗೆ ಪ್ರಾರಂಭವಾಗಬೇಕಿದ್ದ ಸಮಾರಂಭ ೧೧:೩೦ ಕ್ಕೆ ಪ್ರಾರಂಭವಾಯಿತು. ನಾಡಗೀತೆಯನ್ನು ಹಾಡಲು ಪ್ರಾರಂಭಿಸಿದಾಗ ಅಧ್ಯಕ್ಷರು ಎಲ್ಲರೂ ಎದ್ದು ನಿಲ್ಲುವಂತೆ ಕೈಸನ್ನೆಯ ಮೂಲಕ, ಶಾಲಾ ಮಕ್ಕಳಿಗೆ ಹೇಳುವಂತೆ ಹೇಳಿದರು. 

ಮೂರು, ನಾಲ್ಕುಪ್ರಶಸ್ತಿವಿಜೇತರನ್ನು  ಒಟ್ಟಿಗೆ ಕರೆದು, ವೇದಿಕೆಯ ಮೇಲೆ ಕೂಡಿಸಿ ಸನ್ಮಾನಿಸಲಾಯಿತು. ಸನ್ಮಾನಿತರು ಯಾರಿಗೂ ಕಾಣಬಾರದೆಂಬಂತೆ ಛಾಯಾಚಿತ್ರಕಗಾರರು  ಅಡ್ಡ ಗೋಡೆಯಂತೆ ನೆರೆದಿದ್ದರು. 

ಸಮಾರಂಭಕ್ಕೆ ಬರಲು ಸಾಧ್ಯವಾಗದೆ ಇದ್ದ ಪ್ರಶಸ್ತಿವಿಜೇತರಿಗೆ, "ಯಾರನ್ನಾದರೂ ಕಳಿಸಿಕೊಡಿ" ಎಂದು ಹೇಳಿದ್ದ ವ್ಯವಸ್ಥಾಪಕರು, ಧ್ವನಿವರ್ಧಕದಲ್ಲಿ  ".... ಅವರ ಮಗಳು ಬಂದಿದ್ದಾರೆ. ನೀವು ಹಿಂದೆ ಹೋಗಿ ತೆಗೆದುಕೊಂಡು ಬಿಡಿ ಎಂದು ಉದಾಸೀನತೆಯಿಂದ ಎಂಬಂತೆ ಹೇಳಿದರು". ಇದೂ ಸಾಲದಂತೆ "ಅಚಾತುರ್ಯದಿಂದ ನಾನು ಯಾರದಾದರೂ ಹೆಸರನ್ನು ಬಿಟ್ಟಿದ್ದರೆ, ದಯವಿಟ್ಟು ಕೈ ಎತ್ತಿ ಎಂದು ಹೇಳಿದರು. ಲೇಖಕರನ್ನು ಅಮಂತ್ರಿಸಿದ್ದು ತಾವೇ ಎಂಬುದನ್ನು ವ್ಯವಸ್ಥಾಪಕರು ಮರೆತಂತಿತ್ತು. ಹೆಸರು ಮಾತ್ರದಿಂದ ವಿಜೇತರನ್ನು ವೇದಿಕೆಗೆ ಕರೆಯುತ್ತಿದ್ದರು. ಸಮಾರಂಭಕ್ಕೆ ಬಂದಿದ್ದ ಹಿರಿಯರೊಬ್ಬರು, "ಯಾವ ದತ್ತಿ, ಯಾವ ಪುಸ್ತಕ ಅಂತ ಹೇಳ್ರೀ" ಎಂದು ಕೂಗಿದರು. ಆ ನಂತರ ದತ್ತಿ, ಪುಸ್ತಕದ ಹೆಸರುಗಳನ್ನೂ ಹೇಳಿ ಪುರಸ್ಕೃತರನ್ನು ವೇದಿಕೆಗೆ ಕರೆಯಲಾಯಿತು. 

ಪುರಸ್ಕೃತರನ್ನು ಒಬ್ಬೊಬ್ಬರನ್ನಾಗಿ ವೇದಿಕೆಗೆ ಕರೆದು, ಅವರಬಗ್ಗೆ, ಅವರ ಪುಸ್ತಕದ ಬಗ್ಗೆ, ನಾಲ್ಕೇ ನಾಲ್ಕು ಮಾತುಗಳನ್ನು ಹೇಳಿ ಪ್ರಶಸ್ತಿ ಪ್ರದಾನ ಮಾಡಿದ್ದಿದ್ದರೆ ಕೇವಲ ೩೦ ನಿಮಿಷಗಳಲ್ಲಿ ಮುಗಿದ ಈ ಕಾರ್ಯಕ್ರಮ, ೬೦ ನಿಮಿಷಗಳಲ್ಲಿ ಮುಗಿಯುತ್ತಿತ್ತು ಅಷ್ಟೆ. ವ್ಯವಸ್ಥಾಪಕರಿಗೆ ಇಷ್ಟೂ ಸಮಯ, ಸಂಯಮ ಇರಲಿಲ್ಲವೇ?

ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇಷ್ಟು ಅಸಂಸ್ಕೃತ, ಬೇಜವಾಬುದಾರಿತನದ ಕಾರ್ಯಕ್ರಮ ನಡೆಯಬಹುದೆಂದು ಕನಸಿನಲ್ಲೂ ಎಣಿಸಿರಲಿಲ್ಲ. 

ಗಾಯದಮೇಲೆ   ಉಪ್ಪು ಸವರಿದಂತೆ, ಒಂದು ಲಕೋಟೆಯಲ್ಲಿ ನಗದು ಹಣವನ್ನೂ ಕೊಟ್ಟರು. ಲಕೋಟೆಯ ಮೇಲೆ ವಿವಿಧ ಲೆಕ್ಕಗಳನ್ನು ಬರೆದು, ಅವನ್ನು ಹೊಡೆದುಹಾಕಿ, "ಬಹುಮಾನ, ೫೦೦ ರೂ" ಎಂದು ಬರೆಯಲಾಗಿತ್ತು. ಇದು ಪ್ರಶಸ್ತಿಯ ಮೊಬಲಗನ್ನು ಕೊಡುವ ರೀತಿಯೆ? ನೋಂದಾಯಿಸಿಲ್ಪಟ್ಟ ಸಂಸ್ಥೆಗಳು ಚೆಕ್ ಮೂಲಕ ಹಣ ನೀಡುವುದು ನಿಯಮವಲ್ಲವೆ? ಅಲ್ಲದೆ, ಇದು ಬಹುಮಾನವೋ ಪ್ರಶಸ್ತಿಯೋ?

ಇದು ಪ್ರಶಸ್ತಿಪ್ರದಾನ ಮಾಡುವ ರೀತಿಯೆ? ಇವೆಲ್ಲವೂ ಪ್ರಶಸ್ತಿವಿಜೇತರನ್ನು ಅವಮಾನಿಸಿದಂತಾಗಲಿಲ್ಲವೆ?

ಹಿಂದೆ ನಾವು ಪರಿಷತ್ತಿನಲ್ಲಿ ಕಂಡಂತಹ ಸಮಾರಂಭಗಳ ವೈಭವಯುತ ಚಿತ್ರ ಒಮ್ಮೆ ಕಣ್ಣಿನ ಮುಂದೆ ಹಾದುಹೋಗಿ, ಸಾಹಿತ್ಯ ಪರಿಷತ್ತಿನ ಇಂದಿನ ದುಃಸ್ಥಿತಿಯನ್ನು ಕಣ್ಣಾರೆ ಕಂಡು ಮನಸ್ಸಿಗೆ ಬಹಳ ನೋವಾಯಿತು. 


ಪ್ರಶಸ್ತಿ ವಿಜೇತರೊಬ್ಬರ ಮಗಳು ಹಾಗೂ ಮಗ. 


ವಿದ್ಯ ಶಂಕರ್ 
ಜೆ ಎಲ್ ಅನಿಲ್ ಕುಮಾರ್