Thursday, November 27, 2025

ಶ್ರೀ ಎಸ್ ಎಲ್ ಭೈರಪ್ಪ - ಕೆಲವು ನೆನಪುಗಳು



ಇತ್ತೀಚೆಗೆ ಶ್ರೀ ಎಸ್ ಎಲ್ ಭೈರಪ್ಪನವರು ನಿಧನರಾದಾಗ, ಅವರ ಬಗ್ಗೆ ಕೆಲವು ನೆನಪುಗಳು ಒಂದಾದ ಮೇಲೆ ಒಂದು ನನ್ನ ಮನಸ್ಸಿನಲ್ಲಿ ಹರಿದು ಹೋದವು. ಅವುಗಳಲ್ಲಿ ಕೆಲವು ಭೈರಪ್ಪನವರನ್ನು ಚೆನ್ನಾಗಿ ಬಲ್ಲವರಿಗೂ ತಿಳಿಯದಿರುವ ವಿಷಯಗಳು ಇರುವ ಸಾಧ್ಯತೆ ಇರುವುದರಿಂದ ಅವುಗಳನ್ನು ಇಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ. ನನಗೆ ಅವರ ಪರಿಚಯವಾದದ್ದು ನಮ್ಮ ತಂದೆ ಶ್ರೀ ಜೆ ಆರ್ ಲಕ್ಶ್ಮಣರಾಯರ ಮೂಲಕ. 

ಒಂದು ಬಾರಿ ಅವರು ನಮ್ಮ ಕುಟುಂಬದವರನ್ನೆಲ್ಲ ಅವರ ಮನೆಗೆ ಸಾಯಂಕಾಲದ ಚಹಾ ಸೇವನೆಗೆ ಆಹ್ವಾನಿಸಿದ್ದರು. ಅವರ ಮನೆ, ಆಗ ಮೈಸೂರಿನ ಝಾನ್ಸಿ ಲಕ್ಷ್ಮಿಬಾಯಿ ರಸ್ತೆಯಲ್ಲಿರುವ ಹಾರ್ಡ್ವಿಕ್ ಹೈಸ್ಕೂಲಿನ ಮುಂದಿದ್ದ ಒಂದು ಓಣಿಯಲ್ಲಿತ್ತು. ಆ ಓಣಿ ಪ್ರೊ. ಯಾಮುನಾಚಾರ್ಯ ಅವರ ಮನೆ "ವೇದ ಗೃಹಂ"ನ ಪಕ್ಕದಲ್ಲಿತ್ತು. ಈ ವಿಷಯವನ್ನು ಹೇಳಲು ಒಂದು ಕಾರಣವಿದೆ. ನನಗೆ ಇತ್ತೀಚೆಗೆ ತಿಳಿದ ವಿಷಯವೇನೆಂದರೆ, ಭೈರಪ್ಪನವರ ವಿದ್ಯಾಭ್ಯಾಸದ ಮೇಲೆ ಯಾಮುನಾಚಾರ್ಯರ ಪ್ರಭಾವ ಬಹು ಮುಖ್ಯವಾದದ್ದು ಎಂಬುದು. ಭೈರಪ್ಪನವರು ಆ ವಿಷಯದ ಬಗ್ಗೆ ಅವರ ಆತ್ಮಚರಿತ್ರೆ ’ಭಿತ್ತಿ’ಯಲ್ಲಿ ವಿಷದವಾಗಿ ಬರೆದಿದ್ದಾರೆಂದು. ಆ ಮನೆ ನನಗೆ ನಿಕಟವಾಗಿ ಪರಿಚಯವಿದ್ದ ಮನೆ. ಏಕೆಂದರೆ ಯಾಮುನಾಚಾರ್ಯರ ಮೊಮ್ಮಗ, ನಾರಾಯಣಪ್ರಸಾದ್ (ನಾನ), ನನ್ನ ಗೆಳೆಯ. 

ನಮ್ಮ ತಂದೆಯವರು, ಭೈರಪ್ಪನವರು ಮಾತನಾಡುತ್ತಿದ್ದಾಗ ನಮ್ಮ ಕೆಲಸ ಬರೀ ಅದನ್ನು ಕುತೂಹಲದಿಂದ ಕೇಳುವುದು ಮಾತ್ರವಾಗಿತ್ತು. ಅದರಲ್ಲಿ ನನಗೆ ನೆನಪಿರುವ ಒಂದೇ ವಿಷಯವೆಂದರೆ ಭೈರಪ್ಪನವರು "ನಾನು ಊಟ ಮಾಡುವಾಗ ಪ್ರತಿ ತುತ್ತನ್ನೂ ಇಪ್ಪತ್ತೆಂಟು ಬಾರಿ ಅಗಿಯುತ್ತೇನೆ" ಎಂದದ್ದು. ನಮ್ಮ ತಂದೆ ನಕ್ಕು, ನಿಮಗೆ ಬೋರ್ ಆಗಲ್ವ ಎಂದು ಕೇಳಿದರು. ಭೈರಪ್ಪನವರು, ಅವರು ಶೇಖರಿಸಿದ್ದ ಲಾಂಗ್ ಪ್ಲೇಯಿಂಗ್ ರೆಕಾರ್ಡುಗಳನ್ನು (33 1/3 rpm, LPs) ತೋರಿಸಿ, "ಅದಕ್ಕೇ ಇವು ಇರೋದು" ಎಂದರು. ಯಾವುದೋ ಒಂದು ರೆಕಾರ್ಡನ್ನು ಹಾಕಿ ಅದನ್ನು ಕೇಳುತ್ತಾ, ಪ್ರತಿ ತುತ್ತನ್ನೂ ಇಪ್ಪತ್ತೆಂಟು ಬಾರಿ ಅಗಿದು ತಿನ್ನುವುದು ಅವರ ಪರಿಪಾಠವಂತೆ!

ಅವರ ಆ ಸಂಗ್ರಹದಲ್ಲಿ ಬರೇ ಹಿಂದುಸ್ಥಾನಿ ಸಂಗೀತವಿತ್ತು. ಭೈರಪ್ಪನವರ ಪ್ರಕಾರ ಕರ್ನಾಟಕ ಸಂಗೀತದಲ್ಲಿ ಏನೂ ಹುರುಳಿಲ್ಲ. ಸಂಗೀತವೆಂದರೆ ಉತ್ತರಾದಿ ಸಂಗೀತ ಮಾತ್ರ! ಅವರ ಆ ಅಭಿಪ್ರಾಯ ನನಗೆ ಬಹಳ ಅಸಮಾಧಾನ ತಂದಿತ್ತು. ನನ್ನ ಇನ್ನೊಬ್ಬ ಸ್ನೇಹಿತ, ಉದಯ್, ಭೈರಪ್ಪನವರ ಮಗನ ಸ್ನೇಹಿತ ಕೂಡ. ಅವನು ಇತ್ತೀಚೆಗೆ ಹೇಳಿದ ವಿಷಯವೆಂದರೆ, ಅವನು ಭೈರಪ್ಪನವರಿಗೆ ತಿರುವಡುತ್ತುರೈ ಟಿ ಎನ್ ರಾಜರತ್ನಂ ಪಿಳ್ಳೆ ಅವರ ನಾದಸ್ವರದ ಒಂದು ಕ್ಯಾಸೆಟ್ ಕೊಟ್ಟಿದ್ದನಂತೆ. ಕರ್ನಾಟಕ ಸಂಗೀತದಲ್ಲಿ ಅವರಿಗೆ ಹಿಡಿಸಿದ ಸಂಗೀತ ಅದೊಂದೇ ಅಂತೆ!

ಒಂದು ಬಾರಿ, ನಮ್ಮ ತಂದೆ ಬಸ್ಸಿನಲ್ಲಿ ಬೆಂಗಳೂರಿಗೆ ಹೊರಟಿದ್ದರಂತೆ. ಬಸ್ಸು ಮದ್ದೂರಿನಲ್ಲಿ "ಕಾಫ಼ಿ"ಗೆ ನಿಲ್ಲಿಸಿದಾಗ ನಮ್ಮ ತಂದೆ ಅಲ್ಲಿನ ಹೋಟೆಲಿನ ಕಡೆ ಹೋಗುತ್ತಿದ್ದಾಗ ಭೈರಪ್ಪನವರು ಹಿಂದಿನಿಂದ ಬಂದು, "ನಮಸ್ಕಾರ, ಮೊದಲು ಇದನ್ನು ಕೇಳಿ. ಎಲ್ಲರ ಮುಂದೆ ನನ್ನನ್ನು ಭೈರಪ್ಪನವರೇ ಎಂದು ಕರೆದು ಬಿಡಬೇಡಿ!" ಎಂದರಂತೆ. ನಮ್ಮ ತಂದೆ ಆಶ್ಚರ್ಯಚಕಿತರಾಗಿ ಏಕೆಂದು ಕೇಳಿದಾಗ ಅವರ ಉತ್ತರ ಸುಮಾರು ಹೀಗಿತ್ತು: "ನಾನು ಬರಹಗಾರ ಅಂತ ಗೊತ್ತಾದ್ರೆ ಜನ ನನ್ನೊಡನೆ ನೈಜವಾಗಿ ಮಾತನಾಡಲ್ಲ. ಅವರ ನಿಜವಾದ ಭಾವನೆಗಳು, ವಿಚಾರಗಳು ಆಚೆ ಬಂದು ನನ್ನ ಬರಹಕ್ಕೆ ಗ್ರಾಸವಾಗುವ ಅವಕಾಶ ತಪ್ಪಿ ಹೋಗತ್ತೆ. ಅದಿಕ್ಕೇ ಏನೋ ಸುಳ್ಳು ಹೆಸರು ಹೇಳಿ, ವಿದ್ಯಾರಣಯಪುರಂನಲ್ಲಿ ದಿನಸಿ ಅಂಗಡಿ ಇಟ್ಟಿದೀನಿ ಅಂತ ಪಕ್ಕದಲ್ಲಿ ಕೂತಾತನಿಗೆ ಹೇಳಿಬಿಟ್ಟಿದೀನಿ. ನನ್ನ ಗುಟ್ಟು ರಟ್ಟು ಮಾಡಿಬಿಡಬೇಡಿ!" ಇದು ಪ್ರಸಿದ್ಧ ಲೇಖಕ ಸಾಮರ್ಸೆಟ್ ಮಾಮ್‍ನ ವಿಚಾರಕ್ಕೆ ತದ್ವಿರುದ್ಧವಾದದ್ದು. ಅವನ ಪ್ರಕಾರ, ಜನಕ್ಕೆ ತಮ್ಮ ಕತೆ ಹೊರಬರಬೇಕು ಅನ್ನುವ ಆಸೆ ಇರುತ್ತದೆ. ಆದ್ದರಿಂದ ತಾನು ಬರಹಗಾರ ಅಂತ ಗೊತ್ತಾದ ತಕ್ಷಣ ತಮ್ಮ ಜೀವನವನ್ನು ಅವನ ಮುಂದೆ ಬಿಚ್ಚಿಡುತ್ತಾರೆ. ಅದೇ ಅವನ ಕತೆಗಳ ಭಾಗವಾಗಿ ಹೊರ ಬರುತ್ತವೆ! ಅವರಿಬ್ಬರಲ್ಲಿ ಯಾರು ಸರಿಯೋ ಗೊತ್ತಿಲ್ಲ. ಇಬ್ಬರೂ ಸರಿ ಇರಬಹುದೆನ್ನಿ.

ಒಂದು ಬಾರಿ ಭೈರಪ್ಪನವರ ಮನೆಗೆ ಯಾವುದೋ ಕಾರಣಕ್ಕೆ ಹೋಗಿದ್ದಾಗಿನ ಎರಡು ಘಟನೆಗಳು ನೆನಪಿಗೆ ಬರುತ್ತವೆ. ಅವರು ನನ್ನ ಬಗ್ಗೆ ವಿಷದವಾಗಿ ವಿಚಾರಿಸಿದರು. ಅವರ ಕತೆಯ ಯಾವುದಾದರೂ ಪಾತ್ರಕ್ಕೆ ನಾನು ವಿವರಗಳನ್ನು ಕೊಡುತ್ತಿದ್ದೆನೇನೋ ಎಂದು ಕೆಲವು ಸಲ ಯೋಚನೆ ಬಂದಿದೆ. ನಾನು ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ಎಂದು ಹೇಳಿದಾಗ ಅವರು "ನನ್ನ ರೇಡಿಯೋ ಕೆಟ್ಟುಹೋದರೆ ಅದನ್ನು ಸರಿಪಡಿಸಲು ಬರುತ್ತೋ" ಎಂದು ಕೇಳಿದರು. ನಾನು ಇಲ್ಲ ಎಂದಾಗ, ಹಾಗಾದರೆ ನೀನು ಹೇಗೆ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ಎನ್ನುವ ಪ್ರಶ್ನೆ ಕೇಳಿದರು. ನಾನು ಅದಕ್ಕೆ, ಎಲೆಕ್ಟ್ರಾನಿಕ್ಸಿನಲ್ಲಿ ವಿವಿಧ ಕ್ಷೇತ್ರಗಳಿವೆ. ನನ್ನದು ಪವರ್ ಎಲೆಕ್ಟ್ರಾನಿಕ್ಸ್ ಕ್ಷೇತ್ರ. ಅದರಲ್ಲಿನ ಉಪಕರಣಗಳನ್ನು ರೆಪೇರಿ ಮಾಡುವುದಷ್ಟೇ ಅಲ್ಲ ಅವುಗಳನ್ನು ವಿನ್ಯಾಸ ಕೂಡ ಮಾಡುತ್ತೇನೆ ಎಂದು ಹೇಳಿದೆ. ಅವರಿಗೆ ತೃಪ್ತಿಯಾದಂತೆ ಕಾಣಲಿಲ್ಲ. ಅವರಿಗೆ ತೃಪ್ತಿಯಾಯಿತೋ ಇಲ್ಲವೋ ಅನ್ನುವುದು ಅವರ ಮುಖಭಾವದಿಂದ ಕಂಡು ಹಿಡಿಯುವುದಂತೂ ಕಷ್ಟದ ಕೆಲಸ. ಸಾಧಾರಣವಾಗಿ ಅವರ ಮುಖದಲ್ಲಿ ನಿರ್ಲಿಪ್ತತೆಯೊಂದೇ ಕಾಣುತ್ತಿದ್ದು ಯಾವ ಭಾವನೆಗಳೂ ವ್ಯಕ್ತವಾಗುತ್ತಿರಲಿಲ್ಲ.

ಅದೇ ಬಾರಿ ನಡೆದ ಇನ್ನೊಂದು ಘಟನೆ ಎಂದರೆ ಅವರು ಅವರ ಶ್ರೀಮತಿಯವರಿಗೆ ನನಗೊಂದು ಪುರಿ ಉಂಡೆ ಕೊಡುವಂತೆ ಹೇಳಿದರು. ಅವರು ತಂದಿಟ್ಟ ಆ ಉಂಡೆಯ ಗಾತ್ರ ನಾನು ಹೌಹಾರಿದ್ದೆ. ನಾನೆಂದೂ ನೋಡಿರದಂತಹ ಗಾತ್ರದ್ದು. ಸಣ್ಣ ಚಕ್ಕೋತನ ಹಣ್ಣು ಅನ್ನಿ. ನಾನು ಅದನ್ನು ಹೇಗೆ ತಿನ್ನಬೇಕು ಎಂದು ಯೋಚಿಸಿದೆ ಎನ್ನುವುದಕ್ಕಿಂತ ಅದರ ಮೇಲೆ ಹೇಗೆ ದಾಳಿ ಮಾಡಬೇಕು ಎಂದು ಯೋಚಿಸಿದೆ ಅನ್ನುವುದೇ ಸೂಕ್ತವೇನೋ! ಅದನ್ನು ಹಿಡಿದು ಮುರಿಯಲು ಹೋದೆ. ನೀನು ಅದನ್ನು ಕಚ್ಚಿಯೇ ತಿನ್ನಬೇಕು ಎಂದು ತಾಕೀತು ಮಾಡಿದರು. ಅದನ್ನು ತಿನ್ನಲು ನಾನು ನೀರು ಕುದುರೆಯಂತೆ ಬಾಯಿ ತೆರೆಯಬೇಕಿತ್ತು! ಹಾಗೇ ಕಷ್ಟಪಟ್ಟು ಸ್ವಲ್ಪ ತಿಂದು, ಇದನ್ನು ಪೂರ್ತಿ ತಿನ್ನಲು ಸಮಯವಾಗುತ್ತೆ. ನಾನು ಇನ್ನೆಲ್ಲಿಗೋ ಹೋಗಬೇಕು ಎಂದು ಸಬೂಬು ಹೇಳಿದೆ. ಅವರ ಶ್ರೀಮತಿಯವರಿಗೆ ನನ್ನ ಮೇಲೆ ಕರುಣೆ ಮೂಡಿ ಕಾಗದದ ಪೊಟ್ಟಣದಲ್ಲಿ ಅದನ್ನು ಕಟ್ಟಿಕೊಟ್ಟು ಬೀಳ್ಕೊಟ್ಟರು. ಆ ಉಂಡೆ ಬಹಳ ರುಚಿಕರವಾಗಿತ್ತು ಎನ್ನುವುದು ನೆನಪಿದೆ.

ಇನ್ನೊಂದು ಬಾರಿ, ಶ್ರೀ ಸಿಂಧುವಳ್ಳಿ ಅನಂತಮೂರ್ತಿಯವರ ಮನೆಯಲ್ಲಿ ಏನೋ ಸಂದರ್ಭ. ಹತ್ತಾರು ಜನರನ್ನು ರಾತ್ರಿಯ ಊಟಕ್ಕೆ ಕರೆದಿದ್ದರು. ಅದರಲ್ಲಿ ಕೆಲವರು ಲೋಕಾಭಿರಾಮವಾಗಿ ಮಾತನಾಡುತ್ತಾ ಕುಳಿತಿದ್ದಾಗ, ಕನ್ನಡಿಗರಲ್ಲಿ ಇಂಗ್ಲಿಷ್ ಮತ್ತಿತರ ಬಾಷೆಗಳ ಉಪಯೋಗ ಮತ್ತು ಹೊರಗಿನವರು ಕರ್ನಾಟಕಕ್ಕೆ ಬಂದು ನೆಲಸಿಯೂ ಕನ್ನಡ ಕಲಿಯದಿರುವ ವಿಷಯ ಪ್ರಸ್ತಾಪಕ್ಕೆ ಬಂತು. ಭೈರಪ್ಪನವರ ವ್ಯಾಖ್ಯಾನ ಹೀಗಿತ್ತು: ಕನ್ನಡಿಗರು ನಾಯಕಸಾನಿಗಳ ತರಹ. ಯಾರು ಬಂದರೂ ನೀನೇ ದೊಡ್ಡವನು ಎನ್ನುವಂತೆ ವರ್ತಿಸುತ್ತೇವೆ. ನಿನಗೆ ಕನ್ನಡ ಬರಲ್ವಾ? ನಾನೇ ತಮಿಳು ಮಾತಾಡ್ತೀನಿ. ಹಿಂದಿ ಮತಾಡ್ತೀನಿ, ಅನ್ನೋ ಜಾಯಮಾನ ಎಂದು ಖಾರವಾಗಿ ಹೇಳಿದರು. ಆಗಲೂ ಅವರ ಮುಖದ ಮೇಲೆ ಯಾವುದೇ ಭಾವವೂ ಗೋಚರವಾಗಲಿಲ್ಲ!

ಭೈರಪ್ಪನವರು ಒಮ್ಮ ಇಂಗ್ಲೆಂಡಿಗೆ ಹೋಗಿ ಬಂದ ನಂತರ ನಮ್ಮ ತಂದೆಯವರನ್ನು ಕಾಣಲು ನಮ್ಮ ಮನೆಗೆ ಬಂದಿದ್ದರು. ನಮ್ಮಲ್ಲಿದ್ದ ಬೆತ್ತದ ಕುರ್ಚಿಯಲ್ಲಿ ಕುಳಿತು ಮಾತನಾಡುತ್ತಿದ್ದರು. ನಮ್ಮ ತಂದೆಯವರು ಅರಾಮವಾಗಿ ಒರಗಿ ಕೂತಿದ್ದರೂ ಭೈರಪ್ಪನವರು ಒರಗದೆ, ನೆಟ್ಟಗೆ ಕುಳಿತು ಮಾತನಾಡುತ್ತಿದ್ದರು (ಆಡು ಭಾಷೆಯಲ್ಲಿ, ಗೂಟಗುಮ್ಮನ ತರಹ). ಸ್ವಲ್ಪ ಸಮಯದ ನಂತರ ನಮ್ಮ ತಂದೆಯವರು ಅವರನ್ನು ಹಾಗೇಕೆ ಕುಳಿತಿದ್ದೀರಿ ಎಂದು ಕೇಳಿದರು. ಅವರು ಕೊಟ್ಟ ಉತ್ತರ ಸುಮಾರು ಹೀಗಿತ್ತು. ಅವರನ್ನು ಕಾಡುತ್ತಿದ್ದ ಬೆನ್ನು ನೋವಿನ ಬಗ್ಗೆ ಇಂಗ್ಲೆಂಡಿನಲ್ಲಿ ಯಾವುದೋ ವೈದ್ಯನನ್ನು ಕಂಡರಂತೆ. ಅವನ ಪ್ರಕಾರ, ದೇಹದ ಎಲ್ಲ ಖಾಯಿಲೆಗಳಿಗೂ ಕೆಟ್ಟ ಭಂಗಿಯೇ ಕಾರಣ.  ಬೆನ್ನು ಹುರಿಯ ಸ್ವಾಭಾವಿಕ ಆಕಾರ ಸುಮಾರು ಇಂಗ್ಲಿಷ್ ಅಕ್ಷರ ಎಸ್ (s)  ನಂತೆ. ಅಂದರೆ, ಹುರಿಯ ಕೆಳಗಿನ ಭಾಗ ಹೊಟ್ಟೆಯ ಕಡೆಗೆ ಬಾಗಿ ಬೆನ್ನಿನ ಕೆಳಗಿನ ಭಾಗ ನಿಮ್ನವಾಗಿರಬೇಕು (concave). ನಾವು ಒರಗಿ ಕೂತರೆ ಆ ಭಾಗ ಪೀನವಾಗುತ್ತದೆ (convex). ಅದರ ಪರಿಣಾಮವಾಗಿ ಎಲ್ಲಾ ತರಹದ ಕಾಯಿಲೆಗಳೂ ಬರಬಹುದು. ಆದ್ದರಿಂದ ಹಾಗೆ ನೆಟ್ಟಗೆ ಕುಳಿತುಕೊಳ್ಳುವ ಅಭ್ಯಾಸ ಮಾಡಿಕೊಂಡಿದ್ದರು. ಅಷ್ಟಾಗಿಯೂ ಬೆನ್ನು ನೋವು ಅವರನ್ನು ಬಾಧಿಸುತ್ತಿತ್ತು ಎಂದು ಕೇಳಿದ ನೆನಪು. ಅವರು ಹೇಳಿದ್ದನ್ನು ನೆನೆದರೆ, ಅವರು ಯಾರೋ ಕೈರೋಪ್ರಾಕ್ಟರನ್ನು (chiroptactor) ಕಂಡಿದ್ದಿರಬೇಕು. ಪುರಾವೆ ಆಧಾರಿತ, ವೈಜ್ಞಾನಿಕ ವೈದ್ಯನನ್ನಲ್ಲ ಎನಿಸುತ್ತದೆ.

ಒಂದು ಬಾರಿ ಪೋಲ್ಯಾಂಡ್ ಮೂಲದ ನನ್ನ ಸಹೋದ್ಯೋಗಿಯೊಬ್ಬ ಬೆಂಗಳೂರನ್ನು ಬಿಟ್ಟು ನೆದರ್ಲ್ಯಾಂಡಿಗೆ ಹೊರಟುಹೋಗುವವನಿದ್ದ. ಅವನು ನಮ್ಮ ವಿಭಾಗದ ಸಹೋದ್ಯೋಗಿಗಳನ್ನೆಲ್ಲ ಬೆಂಗಳೂರಿನ ಪ್ರಸಿದ್ಧ ಎಂಟಿಆರ್‍ಗೆ ಮಧ್ಯಾಹ್ನದ ಊಟಕ್ಕೆ ಕರೆದೊಯ್ದಿದ್ದ. ಅಲ್ಲಿ ಕುಳಿತಿದ್ದಾಗ, ಭೈರಪ್ಪನವರು ಒಳಬಂದು ಯಾರನ್ನೋ ಹುಡುಕುತ್ತಿದ್ದರು. ನನ್ನ ಸಹೋದ್ಯೋಗಿ-ಸ್ನೇಹಿತನೊಬ್ಬ, ಶ್ರೀಧರನ್, ಅವರ ಅಭಿಮಾನಿ. ನಾನು ಅವರನ್ನು ಮಾತನಾಡಿಸಿ ಬರುತ್ತೇನೆ ಎಂದು ಎದ್ದಾಗ ಆತನೂ ನನ್ನೊಡನೆ ಅವರನ್ನು ಕಾಣಲು ಬಂದ. ನಾನು ಆತನನ್ನು ಅವರಿಗೆ ಪರಿಚಯಿಸಿ ಉಭಯ ಕುಶಲೋಪರಿ ಮುಗಿಸಿ ಬಂದೆ. ನನ್ನ ಸ್ನೇಹಿತನಿಗಂತೂ ಬಹಳ ಸಂತೋಷವಾಯ್ತು. ಅವರ ಮುಖ ಮಾತ್ರ ಎಂದಿನಂತೆ - ನಾವು ಮಾತನಾಡಿಸಿದ್ದು ತಪ್ಪಾಯಿತೇನೋ ಎನ್ನಿಸುವಂತೆ ಇತ್ತು!