Monday, March 17, 2025

ನಂಗೊತ್ತಿರೋ ಗಾದೆಗಳು ನಾ ಕೇಳಿರೋ ಗಾದೆಗಳು

 

 

ಇಷ್ಟೇ ಅಲ್ಲ, ಜ್ಞಾಪಕ ಬಂದ ಹಾಗೆ ಸೇರಿಸ್ತಿರ್ತೀನಿ

ಇವುಗಳಲ್ಲಿ ಹಲವು ಉಪಮೆಗಳು. ಆದರೆ ಬಳಕೆಯಲ್ಲಿ ಅವುಗಳು ಗಾದೆಗಳನ್ನು ಹೋಲುವುದರಿಂದ ಅವನ್ನೂ ಸೇರ್ಸಿದೀನಿ. ಅಲ್ಲದೆ ಕೆಲವು ಸಂಸ್ಕೃತದ ನಾಣ್ಣುಡಿಗಳನ್ನೂ ಸೇರ್ಸಿದೀನಿ, ಯಾಕಂದ್ರೆ ಅವು ಕನ್ನಡದ್ದೇನೋ ಅನ್ನೋ ಹಾಗೆ ಉಪಯೋಗಿಸ್ತಾರೆ.

 

1.                   ಅಂಗೈಯಲ್ಲಿ ಬೆಣ್ಣೆಇಟ್ಕೊಂಡು ತುಪ್ಪಕ್ ಊರೆಲ್ಲ ಹುಡುಕಿದರಂತೆ

2.                   ಅಂಬಲಿ ಕುಡ್ಯೋವ್ನಿಗೆ ಮೀಸೆ ಹಿಡ್ಯೋವ್ನೊಬ್ಬ

3.                   ಅಕ್ಕಿಮೇಲ್ ಆಸೆ, ನೆಂಟ್ರ್ ಮೇಲ್ ಪ್ರೀತಿ

4.                   ಅಗಸ ಹೊಸದ್ರಲ್ ಗೋಣಿ ಎತ್ತೆತ್ತ್ ಒಗೆದ್ನಂತೆ

5.                   ಅಗಸರ ಕತ್ತೆ ದೊಂಬರಿಗೆ ತ್ಯಾಗ

6.                   ಅತ್ತೆಗೊಂದ್ಕಾಲ ಸೊಸೆಗೊಂದ್ಕಾಲ

7.                   ಅಪ್ಪ ಹಾಕಿದ್ ಆಲದ್ಮರ ಅಂತ ಅದಕ್ ನೇಣು ಹಾಕಿಕೊಳ್ಳಕ್ಕಾಗತ್ಯೇ?

8.                   ಅಪ್ಪಾಭಟ್ಟ್ರ ಮಗಳಾಗಿ, ತಿಪ್ಪಾಭಟ್ಟ್ರ ಸೊಸೆಯಾಗಿ, ಪಂಚ ಪಾಂಡವರು ಅಂದ್ರೆ ನಂಗೊತ್ತಿಲ್ವ, ಮಂಚದ ಕಾಲಿನ ಹಾಗೆ ಮೂರ್ಜನ ಅಂದು ಎರಡು ತೋರ್ಸಿ ಒಂದು ಬರೆದ್ಲಂತೆ.

9.                   ಅಯ್ಯಣ್ಣನ ಕುದುರೆಗೆ ಮೈಯೆಲ್ಲ ಗಾಯ

10.                ಅಲ್ಪನಿಗ್ ಐಶ್ವರ್ಯ ಬಂದ್ರೆ ಮಧ್ಯ ರಾತ್ರಿಲಿ ಕೊಡೆ ಹಿಡಿದ

11.                ಅವ್ರಿವ್ರ್ ಮಾತ್ಕೇಳ್ಬೇಡ ನನ್ಮಾತ್ಕೇಳು, ನಡುಬೀದೀಲ್ನಿಂತ್ಕೊಂಡು ಪುಡಿಮಣ್ಣು ಹುಯ್ಕೊ ಅಂದ್ರಂತೆ

12.                ಅಳೋ ಗಂಡ್ಸನ್ನ ನಗೋ ಹೆಂಗ್ಸನ್ನ ನಂಬ ಬಾರ್ದು

13.                ಆಂಜನೇಯನೇ ಹಗ್ಗ ಕಡೀತಿರ್ಬೇಕಾದ್ರೆ ನಮ್ಗೆಲ್ಲಿಂದ ಶ್ಯಾವಿಗೆ ಕೊಡ್ತಾನೆ!?

14.                ಆಡಿದ್ದೇ ಆಡೋ ಕಿಸಿಬಾಯಿ ದಾಸಯ್ಯ

15.                ಆತುರಗಾರನಿಗೆ ಬುದ್ಧಿ ಮಟ್ಟು

16.                ಆನೆ ಹೊಟ್ಟೆ, ಸೂಜಿ ಗಂಟ್ಳು

17.                ಆರಂಭ ಶೂರತ್ವ

18.                ಆರಕ್ಕೆ ಹತ್ತಲ್ಲ, ಮೂರಕ್ಕೆ ಇಳಿಯಲ್ಲ

19.                ಆಷ್ಟರ ಮಟ್ಟಿಗೆ ಕಂಡ್ರಾ ಕೃಷ್ಣಂಭಟ್ಟ್ರೇ, ಮುಪ್ಪಿನ ಕಾಲಕ್ಕೆ ಮೂರ್ಜನ ಹೆಂಡ್ರು

20.                ಆಳ್ ಮಾಡಿದ್ ಕೆಲ್ಸ ಹಾಳು

21.                ಇದ್ದಿದ್ ಇದ್ದಂಗ್ಹೇಳಿದ್ರೆ ಕೆಂಡ್ದಂತಾ ಕೋಪ

22.                ಇರಳ್ಕಂಡ್ಭಾವೀಲ್ ಹಗಲ್ಬಿದ್ರಂತೆ

23.                ಈಚಲು ಮರದ ಕೆಳಗೆ ನಿಂತು ಮಜ್ಜಿಗೆ ಕುಡ್ದಂಗೆ

24.                ಉಡಕ್ಕಿಲ್ದವಳು ಪಟ್ಟೆ ಸೀರೆ ತೆಗೆದ್ಲಂತೆ

25.                ಉತ್ತರನ ಪೌರುಷ ಒಲೆ ಮುಂದೆ

26.                ಉದ್ದುದ್ದೋರ್ಗ್ ಬುದ್ಧಿ ಇಲ್ಲ

27.                ಊಟಕ್ಕಿಲದ್ ಉಪ್ಪಿನ್ಕಾಯಿ

28.                ಊದೋದು ಕೊಟ್ಟು ಬಾರ್ಸೋದು ತೊಗೊಂಡ್ರಂತೆ

29.                ಊರಿಗೆ ಬಂದವ್ಳು ನೀರಿಗೆ ಬರಲ್ವೆ?

30.                ಊರು ಕೊಳ್ಳೆಹೋದ್ಮೇಲೆ ಕೋಟೆ ಬಾಗ್ಲು ಹಾಕಿದ್ರಂತೆ

31.                ಎಂಟ್ ವರ್ಷಕ್ ಮಗ ದಂಟು ಅಂದ

32.                ಎಕ್ಕಡನ ರೇಶಿಮೆ ಶಾಲಲ್ಲಿ ಸುತ್ತಿ ಹೊಡೆದ್ರಂತೆ

33.                ಎತ್ತು ಏರಿಗೆಳೀತು ಕೋಣ ನೀರ್ಗೆಳೀತು

34.                ಎದ್ರಾ ಬಾಹ್ಮಣ್ರೆ ಅಂದ್ರೆ ಗುದ್ದಾಟಕ್ಕೆ

35.                ಎಲ್ಲಾರ್ಮನೆ ದೋಸೇನೂ ತೂತೇ

36.                ಏತಿ ಅಂದ್ರೆ ಪ್ರೇತಿ

37.                ಏನೇ ಗಿಡ್ಡಿ ಓಡಾಟ, ಶಾನ್ಭೋಗ್ರ್ ಮನೇಲ್ ಹಬ್ದೂಟ

38.                ಏಲೆ ಎತ್ತೋ ಗುಂಡ ಅಂದ್ರೆ ಉಂಡವ್ರೆಷ್ಟ್ ಮಂದಿ

39.                ಒಂದ್ ಹೊತ್ತುಂಡವ ಯೋಗಿ, ಎರಡ್ ಹೊತ್ತುಂಡವ ಭೋಗಿ, ಮೂರ್ ಹೊತ್ತುಂಡವ ರೋಗಿ, ನಾಕ್ ಹೊತ್ತುಂಡವನ್ ಎತ್ಕೊಂಡ್ ಹೋಗಿ

40.                ಒಲ್ಲದ್ ಗಂಡಂಗ್ ಮೊಸರಲ್ ಕಲ್ಲು

41.                ಓತಿಕ್ಯಾತಕ್ಕೆ ಬೇಲಿ ಸಾಕ್ಷಿ

42.                ಕಂಡವ್ರ್ ಮಕ್ಕಳ್ನ್ ಬಾವೀಗ್ತಳ್ಳಿ ಆಳ‌ನೋಡೋದು

43.                ಕಪ್ಪೇನ ತಕಡೀಲ್ ಹಾಕ್ದಂಗೆ

44.                ಕಳ್ಳನ್ ನಂಬಿದ್ರೂ ಕುಳ್ಳನ್ ನಂಬಾರ್ದು

45.                ಕಳ್ಳನ್ಮನಸ್ಸು ಹುಳ್ಹುಳ್ಗೆ

46.                ಕಾಗೆ ಕಾ ಅನ್ನಕ್ಮುಂಚೆ ಬಡಿದು ಬಾಯಿಗೆ ಹಾಕ್ಕೊಂಡ್ರಂತೆ.

47.                ಕಾಗೆ ವಾಂತಿ ಮಾಡಿದ ಕತೆ

48.                ಕಾರ್ಯವಾಸಿ ಕತ್ತೆಕಾಲ್ಕಟ್ಟು

49.                ಕಾಲು ಸುಟ್ಟ ಬೆಕ್ಕಿನ ತರಹ

50.                ಕಾಸಿಗೆ ಹೋದ ಮಾನ ಆನೆ ಕೊಟ್ರೂ ಬರ್ದು

51.                ಕುಂಬಳ್ಕಾಯ್ ಕಳ್ಳ ಅಂದ್ರೆ ಹೆಗಲ್ ಮುಟ್ ನೋಡ್ಕೊಂಡ್ನಂತೆ

52.                ಕುಂಬಾರಂಗ್ ಒಂದ್ ವರ್ಷ, ದೊಣ್ಣೇಗ್ ಒಂದ್ನಿಮ್ಷ

53.                ಕುಣೀಲಾರದ ಸೂಳೆ ನೆಲ ಡೊಂಕು ಅಂದ್ಲಂತೆ

54.                ಕುದುರೆ ಕಂಡ್ರೆ ಕಾಲ್ನೋವು

55.                ಕುಲಗೆಟ್ರೂ ಸುಖವಿಲ್ಲ

56.                ಕೂತು ಉಂಡ್ರೆ ಕುಡ್ಖೆ ಹಣ ಸಾಲ್ದು

57.                ಕೂಸ್ ಹುಟ್ಟಕ್ಮುಂಚೆ ಕುಲಾವಿ ಹೊಲ್ದ್ರಂತೆ

58.                ಕೆಲಸ್ವಿಲ್ಲದ್ಕುಂಬಾರ ಮಗನ್ಕುಂಡೆ ತಟ್ಟಿದ್ನಂತೆ

59.                ಕೆಲಸ್ವಿಲ್ಲದ್ಬಡ್ಗಿ ಮಗನ್ ಕುಂಡೆ ಕೊರೆದ್ನಂತೆ

60.                ಕೈ ಕೆಸರಾದರೆ ಬಾಯ್ ಮೊಸರು

61.                ಕೊಂಕಣ ಸುತ್ತಿ ಮೈಲಾರಕ್ಕೆ

62.                ಕೋಣನ್ಮುಂದೆ ಕಿಂದರಿ ನುಡಿಸ್ದಂಗೆ(ಬಾರಿಸ್ದಂಗೆ)

63.                ಕೋತಿ ತಾನ್ಕೆಡೋದಲ್ದೆ ವನನೆಲ್ಲ ಕೆಡಿಸ್ತಂತೆ

64.                ಕೋತಿ ಮೊಸರನ್ನ ತಿಂದ್ ಹೋತದ್ ಗಡ್ಡಕ್ ಮೆತ್ತಿತಂತೆ

65.                ಕೋತಿ ಹುಣ್ಣು

66.                ಕೋಲು ಮುರಿಬಾರ್ದು, ಹಾವು ಸಾಯ್ಬಾರ್ದು

67.                ಕೋಳೀನ ಕೇಳಿ ಮಸಾಲೆ ಅರಿತಾರಾ?

68.                ಗಂಡ್ ಹೆಂಡ್ರ್ ಜಗಳ್ದಲ್ ಕೂಸ್ ಬಡ್ವಾಯ್ತು

69.                ಗೋಕುಲಾಷ್ಟಮೀಗೂ ಇಮಾಮ್ ಸಾಬ್ರಿಗೂ ಏನ್ ಸಂಬಂಧ?

70.                ಚಾಪೆ ಕೆಳಗ್ ನುಗ್ಗಿದ್ರೆ ರಂಗೋಲೆ ಕೆಳಗ್ ನುಗ್ಗಿದ್ರಂತೆ

71.                ಜಗಲಿ ಹಾರಿ, ಗಗನ ಹಾರಬೇಕು

72.                ಜನ ಮರುಳೋ ಜಾತ್ರೆ ಮರುಳೋ?

73.                ಜಾಣ ಕಿವುಡು

74.                ತಾಯಿಯಂತೆ ಮಗಳು ನೂಲ್ನಂತೆ ಸೀರೆ

75.                ತುಂಬಿದ್ ಕೊಡ ತುಳ್ಕಲ್ಲ

76.                ದಿನಾ ಸಾಯೋವ್ರಿಗ್ ಅಳೋವ್ರ್ಯಾರು

77.                ದುಡ್ಡೇ ದೊಡ್ಡಪ್ಪ

78.                ದುರ್ಭಿಕ್ಷದಲ್ಲಿ ಅಧಿಕಮಾಸ

79.                ದುಷ್ಟ್ರನ್ಕಂಡ್ರೆ ದೂರ ಇರು

80.                ದೂರದ ಬೆಟ್ಟ ಕಣ್ಣಿಗ್ ನುಣ್ಣ್ಗೆ

81.                ದೇವ್ರು ವರ ಕೊಟ್ರೂ ಪೂಜಾರಿ ಕೊಡ

82.                ಧರ್ಮಕ್ ದಟ್ಟಿ ಕೊಟ್ರೆ ಹಿತ್ತಲ್ಗ್ ಹೋಗಿ ಮೊಳ ಹಾಕಿದ್ರಂತೆ

83.                ನವಿಲನ್  ನೋಡಿ ಕೆಂಭೂತ ಗರಿ ಕೆದರ್ಕೊಂಡ್ ಕುಣೀತಂತೆ

84.                ನಾಯಿ ಬೊಗಳಿದ್ರೆ ದೇವ್ಲೋಕ ಹಾಳೆ?

85.                ನಾಯಿ ಹೆಸರು ಸಂಪಿಗೆ

86.                ನಾಯಿಬಾಲ ಡೊಂಕು

87.                ನಾಯೀಗ್ಯಾಕ್ ಶ್ಯಾಮಿಗೆ (ಶ್ಯಾವಿಗೆ) ಪಾಯ್ಸ್

88.                ಪಾಪಿ ಸಮುದ್ರಕ್ ಹೋದ್ರೂ ಮೊಣಕಾಲುದ್ದ ನೀರು

89.                ಪ್ರಾಣ ಹೋದ್ರೂ ಪರ್ವಾಗಿಲ್ಲ ಪ್ರಾಸ ಹೋಗ್ಲಿಲ್ಲ ಅಂದ್ನಂತೆ

90.                ಬಾಣ್ಲೆ ಇಂದ ಬೆಂಕೀಗ್ ಬಿದ್ದಂಗ್ ಆಯ್ತು

91.                ಬಾಯ್ಬಿಟ್ರ್ ಬಣ್ಣ್ಗೇಡು

92.                ಬಿಸಿತುಪ್ಪ, ನುಂಗೋಹಾಗಿಲ್ಲ ಉಗ್ಯೋಹಾಗಿಲ್ಲ

93.                ಬೀದೀಲ್ಹೋಗೋ ಮಾರಿ ಮನೇಗ್ಬ್ಂದ್ ಹೋಗವ್ವ

94.                ಬೀಸೋ ದೊಣ್ಣೆ ತಪ್ಪಿದ್ರೆ ನೂರ್ ವರ್ಷ ಆಯಸ್ಸು

95.                ಬೂದಿಮುಚ್ಚಿದ ಕೆಂಡ

96.                ಬೆಕ್ಕಿಗೆ ಚೆಲ್ಲಾಟ ಇಲೀಗೆ ಪ್ರಾಣ್ಸಂಕ್ಟ

97.                ಬೆಳೆಯುವ ಮರ ಮೊಳಕೆಯಲ್ಲಿ

98.                ಮಂಗನ ಕೈಲಿ ಮಾಣಿಕ್ಯ ಕೊಟ್ಟಂಗೆ

99.                ಮದುವೆ ಆಗೋ ಬ್ರಾಹ್ಮಣ ಅಂದ್ರೆ ನೀನೇ ನನ್ಹೆಂಡ್ತಿ ಅಂದ್ನಂತೆ

100.             ಮದ್ವೆ ಆಗೋತನಕ ಹುಚ್ ಬಿಡ್ದು, ಹುಚ್ ಬಿಡೋತನಕ ಮದ್ವೆ ಆಗ್ದು

101.             ಮನೆಗೆ ಮಾರಿ ಪರರಿಗೆ ಉಪಕಾರಿ

102.             ಮನೇಲ್ಹುಲಿ ಹೊರಗಿಲಿ

103.             ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ

104.             ಮೌನಂ ಸಮ್ಮತಿ ಲಕ್ಷಣಂ

105.             ಯಥಾ ರಾಜ ತಥಾ ಪ್ರಜಾ

106.             ಯಾರ್ದೋ ಸೀರೆ ಎಲ್ಲವ್ವನ್ ಜಾತ್ರೆ

107.             ಯಾವ ಹುತ್ತದಲ್ಲಿ ಯಾವ ಹಾವೋ

108.             ರಾತ್ರಿಯೆಲ್ಲ ರಾಮಾಯ್ಣ ಕೇಳಿ ರಾಮಂಗೂ ಸೀತೆಗೂ ಏನ್ಸಂಬಂಧ ಅಂದ್ರಂತೆ

109.             ರಾಮೇಶ್ವರಕ್ ಹೋದ್ರೂ ಶನೇಶ್ವರಕಾಟ ಬಿಡ್ದು

110.             ರಾವಣನ್ ಹೊಟ್ಟೇಗ್ ಅರ್ಕಾಸು ಮಜ್ಜಿಗೆ

111.             ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು

112.             ರೋಗಿ ಬಯ್ಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಅದೆ

113.             ವಿನಾಶಕಾಲೇ ವಿಪರೀತ ಬುದ್ಧಿಹಿ

114.             ವೇದ ಸುಳ್ಳಾದ್ರೂ ಗಾದೆ ಸುಳ್ಳಾಗ್ದು

115.             ವೇದಾಂತ ಅಂಬಲಿಕ್ಕೆ, ಬದನೆಕಾಯಿ ತಿಂಬ್ಲಿಕ್ಕೆ

116.             ಶುಭಸ್ಯ ಶೀಘ್ರಂ

117.             ಸನ್ಯಾಸಿ ಸಂಸಾರ

118.             ಸರ್ವ ಚಿತ್ತಾರ ಮಶಿ ನುಂಗಿತು

119.             ಸಾರ್ಸಿದ್ ಮನೇಲ್ ಬೋಳಪ್ ಹೇತ

120.             ಸ್ವತಃ ಬುದ್ಧಿ ಇಲ್ಲ, ಬೇರೇವ್ರು ಹೇಳಿದ್ರೆ ಕೇಳಲ್ಲ

121.             ಹಂಸಕ್ಷೀರ ನ್ಯಾಯ

122.             ಹಲ್ಲಿದ್ರೆ ಕಡ್ಲೆ ಇಲ್ಲ, ಕಡ್ಲೆ ಇದ್ರೆ ಹಲ್ಲಿಲ್ಲ

123.             ಹಳೇ ಗಂಡನ್ ಪಾದವೇ ಗತಿ

124.             ಹಾಗಾಲ್ಕಾಯ್ಗೆ ಬೇವಿನ್ಕಾಯ್ ಸಾಕ್ಷಿ

125.             ಹಾಸಿಗೆ ಇದ್ದಷ್ಟು ಕಾಲು ಚಾಚು

126.             ಹಿತ್ತಲ ಗಿಡ ಮದ್ದಲ್ಲ

127.             ಹುಚ್ಮುಂಡೆ ಮದುವೇಲ್ ಉಂಡವ್ನೇಜಾಣ

128.             ಹೆಂಡತಿ ದಾಕ್ಷಿಣ್ಯಕ್ಕೆ ಸಿಂಬಳ್ಬುರುಕ ಭಾವ್ಮೈದ್ನನ್ ಎಂಜ್ಲ್ ತಿಂದ್ನಂತೆ

129.             ಹೆತ್ತವರಿಗ್ ಹೆಗ್ಣ ಮುದ್ದು

130.             ಹೊಟ್ಟೇಗ್ ಹಿಟ್ಟಿಲ್ಲ ಜುಟ್ಟಿಗ್ ಮಲ್ಲಿಗೆ ಹೂವು

131.             ಹೊಸ ವೈದಂಗಿತ ಹಳೆ ರೋಗಿ ಮೇಲು

132.             ಹೊಸ್ನೀರ್ ಬಂದು ಹಳೇ ನೀರ್ ಕೊಚ್ಕೊಂಡ್ ಹೋಯ್ತು

133.             ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಇಂದ

 










































































































Wednesday, May 17, 2017

ಮೇಷ್ಟ್ರು ಮತ್ತು ಪವಾಡ



೧೯೫೦ರ ದಶಕದ ಕೊನೆಯ ವರ್ಷಗಳಲ್ಲಿನ ಶಿವಮೊಗ್ಗೆ. ಇಲ್ಲಿಯ ಸರ್ಕಾರಿ ನೌಕರರ ವಸತಿಯ ಸಾಲುಮನೆಗಳಲ್ಲಿನ ಒಂದು ಮನೆಯಲ್ಲಿ ಸಹ್ಯಾದ್ರಿ ಕಾಲೇಜಿನಲ್ಲಿನ ಅಧ್ಯಾಪಕರೊಬ್ಬರು ಅವರ ಕುಟುಂಬದ್ದೊಂದಿಗೆ ವಾಸವಿದ್ದರು. ಅಲ್ಲಿನ ಇತರ ಮನೆಗಳಿಗಿಂತ ದೊಡ್ಡದಾಗಿದ್ದ ಆರು ಮನೆಗಳಲ್ಲೊಂದರಲ್ಲಿ ಅವರ ವಾಸ. ಅವರ ಮೇಲೆ ಅಲ್ಲಿನ ಜನರಿಗೆ ಬಹಳ ಮರ್ಯಾದೆ, ಗೌರವಗಳಿದ್ದವು. ಎಲ್ಲರೂ ಅವರನ್ನು ’ಮೇಷ್ಟ್ರು’ ಎಂದೇ ಗುರುತಿಸುತ್ತಿದ್ದರು. 

ಮೇಷ್ಟ್ರು ಸ್ವತಃ ನಾಸ್ತಿಕರಾದರೂ, ಮಕ್ಕಳಿಗೆ ನಮ್ಮ ಸಂಸ್ಕೃತಿಯ ಬಗ್ಗೆ  ತಿಳಿದಿರಬೇಕೆಂಬ ಉದ್ದೇಶದಿಂದ ಕೆಲವು ಹಬ್ಬಗಳನ್ನು ಮನೆಯಲ್ಲಿ ಆಚರಿಸುತ್ತಿದ್ದರು. ಹಬ್ಬದ ಪೂಜೆ ಪುನಸ್ಕಾರಗಳಿಗಿಂತ ಊಟಕ್ಕೇ ಪ್ರಾಧಾನ್ಯವಿತ್ತು ಎಂದರೂ ತಪ್ಪಿಲ್ಲವೆನ್ನಿ. ಅಂತಹ ಹಬ್ಬಗಳಲ್ಲಿ ಗಣೇಶನ ಹಬ್ಬವೂ ಒಂದು. ಆ ವಸತಿಗಳಲ್ಲಿ ಇರುತ್ತಿದ್ದ ಜೋಯಿಸ್‍ ಎಂಬಾತ ಮೇಷ್ಟರ ಮನೆಯಲ್ಲಿ ಹಬ್ಬದ ಪೂಜೆ ಮಾಡಿಸುವ ಜವಾಬ್ದಾರಿಯನ್ನು ತಾವೇ ಹೊತ್ತು, ಹಬ್ಬದ ದಿನ ಮೊದಲ ಪೂಜೆ ಮೇಷ್ಟರ ಮನೆಯಲ್ಲಿ ಮಾಡಿಸಿದ ನಂತರ ಇತರ ಮನೆಗಳಲ್ಲಿ ಪೂಜೆ ಮಾಡಿಸುವ ಪರಿಪಾಠವಿಟ್ಟುಕೊಂಡಿದ್ದರು.

ಹಬ್ಬದ ದಿನ ಹತ್ತಾರು ಗುಂಪುಗಳಲ್ಲಿ ಹುಡುಗರು ಬಂದು, ಗಣಪತಿಯ ದರ್ಶನ ಮಾಡಿ ಜೈಕಾರ ಹಾಕಿ ಹೋಗುತ್ತಿದ್ದರು. ಎಲ್ಲ ಮನೆಗಳಲ್ಲಿ ಸಂಭ್ರಮವೋ ಸಂಭ್ರಮ. ಹಬ್ಬದ ನಂತರದ ಒಂದು ದಿನವನ್ನು ಆ ಜೋಯಿಸರೇ ನಿರ್ಧರಿಸಿ, ಮೇಷ್ಟರ ಕೈಯಿಂದ ಗಣಪತಿಯ ವಿಸರ್ಜನೆಯನ್ನೂ ಮಾಡಿಸುತ್ತಿದ್ದರು. ಆ ವಸತಿಗಳಲ್ಲಿ ವಾಸವಿದ್ದ ಕೆಲವರು, ಅವರ ಮನೆಯಲ್ಲಿನ ಮಕ್ಕಳು, ಮೇಷ್ಟರ ಸ್ನೇಹಿತರು, ಬಂಧುಗಳು ಆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ಹತ್ತಿರದಲ್ಲೇ ಇದ್ದ ಒಂದು ಭಾವಿಯಲ್ಲಿ ಗಣಪತಿಯ ವಿಸರ್ಜನೆಯಾಗುತ್ತಿತ್ತು. ಮೇಷ್ಟರು ತಟ್ಟೆಯಲ್ಲಿ ಗಣಪತಿಯ ವಿಗ್ರಹವನ್ನಿಟ್ಟುಕೊಂಡು ಹೊರಟಾಗ ಇತರರು ಅವರ ಹಿಂದೆ ಭಾವಿಗೆ ಸಾಗುತ್ತಿದ್ದರು.

ಒಂದು ಬಾರಿ ಗಣೇಶನ ವಿಸರ್ಜನೆಯಲ್ಲಿ ಒಂದು ಘಟನೆ ನಡೆಯಿತು. ಆ ಬಾರಿ, ಗಣಪತಿಯ ವಿಗ್ರಹದ ಕಿರೀಟದ ಮೇಲೆ, ತುತ್ತ ತುದಿಯಲ್ಲಿ, ಒಂದು ಸುಂದರ ರೋಜಾ ಹೂವನ್ನು ಸಿಕ್ಕಿಸಿ ಅಲಂಕಾರ ಮಾಡಿದ್ದರು ಮೇಷ್ಟರ ಪತ್ನಿ ಶಾಂತಮ್ಮನವರು. ಮೇಷ್ಟ್ರು ಭಾವಿಯನ್ನು ತಲುಪಿದಂತೆಯೇ, ಜೋಯಿಸರು ಗಣಪತಿಗೆ ಮಂಗಳಾರತಿ ಮಾಡಿದರು. ಮೇಷ್ಟ್ರು ಗಣಪನ ವಿಗ್ರಹವನ್ನು ಅದನ್ನಿಟ್ಟಿದ್ದ ತಟ್ಟೆಯಿಂದ ಹೊರತೆಗೆದು, ಭಾವಿಯ ಕಟ್ಟೆಗೆ ಒರಗಿ ನಿಂತು ವಿಗ್ರಹವು ಭಾವಿಯ ಬಾಯಿಯ ಮಧ್ಯಕ್ಕೆ ಇರುವಂತೆ ಎರಡೂ ಕೈಚಾಚಿ ನಿಂತರು. ಜೋಯಿಸರು ಇನ್ನಷ್ಟು ಮಂತ್ರಗಳನ್ನು ಹೇಳಿ, "ಇನ್ನು ಬಿಡಿ" ಅಂದರು. ಮೇಷ್ಟ್ರು ವಿಗ್ರಹವನ್ನು ಬಿಟ್ಟರು. ಅದು ನೇರವಾಗಿ ಬಿತ್ತು. ಬಿದ್ದ ಶಬ್ದ ಕೇಳಿಸಿತು. 

ಮೇಷ್ಟರ ಕೈ ಇನ್ನೂ ಅಲ್ಲೇ ಇತ್ತು. ಎಲ್ಲರೂ ನೋಡುತ್ತಿದ್ದಂತೆ, ವಿಗ್ರಹದ ಮೇಲೆ ಸಿಕ್ಕಿಸಿದ್ದ ಕೆಂಪು ರೋಜಾ ಹೂವು  ಭಾವಿಯ ಆಳದಿಂದ ನೆಟ್ಟಗೆ ಮೇಲಕ್ಕೆ ಬಂತು. ಮಂಗಳಾರತಿಯ ಮಂದ ಬೆಳಕಿನಲ್ಲೂ ಅದು ಮೇಷ್ಟರಿಗೆ ಕಂಡು ಅವರು ಅದನ್ನು ಹಿಡಿದುಕೊಂಡರು. ನೆರೆದಿದ್ದ ಜನರೆಲ್ಲ ಆಶ್ಚರ್ಯದಿಂದ ಪುಳಕಿತರಾಗಿ ಅದು ಒಂದು ಪವಾಡವೇ ಎಂದು ಭಾವಿಸಿದರು! ಜೋಯಿಸರಂತೂ ಅತ್ಯಂತ ಭಯ ಭಕ್ತಿಗಳಿಂದ, "ಇದು ಆ ಗಣೇಶನ ಅನುಗ್ರಹ! ಪ್ರಸಾದ!! ಇದನ್ನು ಶಾಂತಮ್ಮನವರೇ ಮುಡಿದುಕೊಳ್ಳಬೇಕು ಎಂದು ತಾಕೀತು ಮಾಡಿದರು. ಮೇಷ್ಟರಿಗೆ ನಗು. ಸರಿ, ಜೋಯಿಸರು ಹೇಳಿದಂತೆಯೇ ಶಾಂತಮ್ಮನವರು, ಅದನ್ನು ತಮ್ಮ ಕೊಂಡೆಗೆ ಮುಡಿದುಕೊಂಡರು. ಅಲ್ಲಿ ನೆರೆದಿದ್ದವರೆಲ್ಲ ಅದೇ ವಿಷಯವನ್ನು ವಿಸ್ಮಯದಿಂದ ಮಾತಾಡಿಕೊಳ್ಳುತ್ತಾ ಹಿಂದಿರುಗಿದರು. 

ಮಾರನೆಯ ಮುಂಜಾನೆ ಕಂಡ ದೃಷ್ಯ ಹೀಗಿತ್ತು: ಹಿಂದಿನ ರಾತ್ರಿಯ ಘಟನೆಯನ್ನು ಕೇಳಿ, ಅದು ಪವಾಡವೆಂದು ನಂಬಿ, ಅದರ ಬಗ್ಗೆ ಮೇಷ್ಟರನ್ನು ಅಭಿನಂದಿಸಲು ಯಾರೋ ಬಂದಿದ್ದರು.  ಅದು ಪವಾ್ಡವಲ್ಲ, ಅದಕ್ಕೆ ಸಾಧಾರಣ ಭೌತಿಕ ಕಾರಣಗಳಿದ್ದು,  ಪ್ರಾಥಮಿಕ ಭೌತಶಾಸ್ತ್ರದ ಸಹಾಯದಿಂದ ಅದನ್ನು ವಿವರಿಸಬಹುದು.  ವಿಗ್ರಹವು ನೀರನ್ನು ಭೇದಿಸಿ ವೇಗವಾಗಿ ಒಳಹೋದಮೇಲೆ ಸುತ್ತಲಿನ ನೀರು ವಿಗ್ರಹವು ತೆರವು ಮಾಡಿದ ಜಾಗವನ್ನು ಮತ್ತೆ ತುಂಬಲು ಹೇಗೆ ರಭಸವಾಗಿ ನುಗ್ಗಿರಬೇಕು. ವಿಗ್ರಹದ ತುದಿಯಲ್ಲಿದ್ದ ಹಗುರವಾದ ಹೂವನ್ನು ಒಳನುಗ್ಗುವ ನೀರು ಹೇಗೆ ತಳ್ಳಿರಬೇಕು. ಅದು ಹೂವು ನೆಟ್ಟಗೆ ಮೇಲೆ ಬರುವಂತೆ ಹೇಗೆ ಮಾಡಿರಬೇಕು. ಇದು ಪವಾಡವಲ್ಲ, ಕೇವಲ ಅಸಾಮಾನ್ಯ ಆಕಸ್ಮಿಕ ಘಟನೆ, ಎಂಬ ವಿವರಣೆ ಮೇಷ್ಟರಿಂದ ನಡೆಯುತ್ತಿತ್ತು.

Monday, April 25, 2016

ಕ್ರೌರ್ಯ




                           

                          ಮೂರುರಸ್ತೆಗಳು ಸೇರುವೆಡೆ 
                          ಮೂಢನಂಬಿಕೆಯಿಂದೊಡೆದ
                          ಮೊಟ್ಟೆಗಳು  ಉಣಲಿರದೆಷ್ಟುಹಸುಳೆ
                          ಜೀವಗಳನ್ನುಳಿಸೀತೆಂದು ನೊಂದನೋಮಾರ









Monday, February 8, 2016

ಪೊರೆಯ ತೊರೆ!







ಬೇಸಿಗೆಯ ಬೇಗೆಯಲಿ ಮುಂಗಾರಿನ ಸೋನೆಯೇ ಸೈ ಎಂದಂತೆ,  
ಬೇಲಿಯಾಚೆ ಬೆಳೆದ ಹುಲ್ಲೆಷ್ಟು ಹಸಿರು ಎಂದು ಹಾತೊರೆದಂತೆ,
ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳೀಯುಗದ ಸೊಬಗು ಸೋಜಿಗಗಳ ಬದಿಗೊತ್ತಿ,
ಅಳಿದ, ಹಿಂದುಳಿದ ಹಿಂದಿನದಕ್ಕೆ ಹಾತೊರೆಯದಿರೆಂದ ಓಮಾರ.




Thursday, January 21, 2016

ಮುದ



ಛಳಿಗಾಲದ ಬರಡು ಹವೆಯಿಂದ ಬೇಸತ್ತ ಮೈಮನಸಿಗೆ
ಅನಿರೀಕ್ಷಿತ ಮಳೆಯು ತಂದಿತ್ತು, ಮುದ ತರುವ, ನವಿರು
ರೇಶೀಮೆಯಂದದ, ತೇವಭರಿತ, ಬದುಕು ಬಯಸುವ, ಛಳಿಯ
ತೆರೆದ ತೋಳುಗಳಿಂ ಸ್ವಾಗತಿಸುವಂದದ ಕುಳಿರ್ಗಾಳಿ!




Wednesday, November 12, 2014

Rubaiyat of Omar Khayam - XL





ಗೊತ್ತುಂಟೆ ನಾನೆಂತ ಮೋಜಿನಲಿ 
ಎರಡನೆಯ ಮದುವೆಯಾದೆ?
ಬರಡು ತರ್ಕವ ಬಡಿದೋಡಿಸಿ
ಲತೆಯ ಕುವರಿಯ  ಕೈಪಿಡಿದೆ


ಒಮರ್ ಖಯಾಮನ ಒಂದು ಪದ್ಯದ ಭಾವಾನುವಾದ

Friday, October 3, 2014

ಹೀಗೊಂದು ಪ್ರಶಸ್ತಿಪ್ರದಾನ ಸಮಾರಂಭ



ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ  ಇಂದು (೧೨-೦೯-೨೦೧೪) ವಿವಿಧ ದತ್ತಿಗಳ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. 

ಕರ್ನಾಟಕದ ವಿವಿಧ ಭಾಗಗಳಿಂದ ಬಂದ ಸುಮಾರು ಹದಿನೈದು ಇಪ್ಪತ್ತು ಲೇಖಕರಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. 

ಬೆಳಿಗ್ಗೆ ೧೧ ಘಂಟೆಗೆ ಪ್ರಾರಂಭವಾಗಬೇಕಿದ್ದ ಸಮಾರಂಭ ೧೧:೩೦ ಕ್ಕೆ ಪ್ರಾರಂಭವಾಯಿತು. ನಾಡಗೀತೆಯನ್ನು ಹಾಡಲು ಪ್ರಾರಂಭಿಸಿದಾಗ ಅಧ್ಯಕ್ಷರು ಎಲ್ಲರೂ ಎದ್ದು ನಿಲ್ಲುವಂತೆ ಕೈಸನ್ನೆಯ ಮೂಲಕ, ಶಾಲಾ ಮಕ್ಕಳಿಗೆ ಹೇಳುವಂತೆ ಹೇಳಿದರು. 

ಮೂರು, ನಾಲ್ಕುಪ್ರಶಸ್ತಿವಿಜೇತರನ್ನು  ಒಟ್ಟಿಗೆ ಕರೆದು, ವೇದಿಕೆಯ ಮೇಲೆ ಕೂಡಿಸಿ ಸನ್ಮಾನಿಸಲಾಯಿತು. ಸನ್ಮಾನಿತರು ಯಾರಿಗೂ ಕಾಣಬಾರದೆಂಬಂತೆ ಛಾಯಾಚಿತ್ರಕಗಾರರು  ಅಡ್ಡ ಗೋಡೆಯಂತೆ ನೆರೆದಿದ್ದರು. 

ಸಮಾರಂಭಕ್ಕೆ ಬರಲು ಸಾಧ್ಯವಾಗದೆ ಇದ್ದ ಪ್ರಶಸ್ತಿವಿಜೇತರಿಗೆ, "ಯಾರನ್ನಾದರೂ ಕಳಿಸಿಕೊಡಿ" ಎಂದು ಹೇಳಿದ್ದ ವ್ಯವಸ್ಥಾಪಕರು, ಧ್ವನಿವರ್ಧಕದಲ್ಲಿ  ".... ಅವರ ಮಗಳು ಬಂದಿದ್ದಾರೆ. ನೀವು ಹಿಂದೆ ಹೋಗಿ ತೆಗೆದುಕೊಂಡು ಬಿಡಿ ಎಂದು ಉದಾಸೀನತೆಯಿಂದ ಎಂಬಂತೆ ಹೇಳಿದರು". ಇದೂ ಸಾಲದಂತೆ "ಅಚಾತುರ್ಯದಿಂದ ನಾನು ಯಾರದಾದರೂ ಹೆಸರನ್ನು ಬಿಟ್ಟಿದ್ದರೆ, ದಯವಿಟ್ಟು ಕೈ ಎತ್ತಿ ಎಂದು ಹೇಳಿದರು. ಲೇಖಕರನ್ನು ಅಮಂತ್ರಿಸಿದ್ದು ತಾವೇ ಎಂಬುದನ್ನು ವ್ಯವಸ್ಥಾಪಕರು ಮರೆತಂತಿತ್ತು. ಹೆಸರು ಮಾತ್ರದಿಂದ ವಿಜೇತರನ್ನು ವೇದಿಕೆಗೆ ಕರೆಯುತ್ತಿದ್ದರು. ಸಮಾರಂಭಕ್ಕೆ ಬಂದಿದ್ದ ಹಿರಿಯರೊಬ್ಬರು, "ಯಾವ ದತ್ತಿ, ಯಾವ ಪುಸ್ತಕ ಅಂತ ಹೇಳ್ರೀ" ಎಂದು ಕೂಗಿದರು. ಆ ನಂತರ ದತ್ತಿ, ಪುಸ್ತಕದ ಹೆಸರುಗಳನ್ನೂ ಹೇಳಿ ಪುರಸ್ಕೃತರನ್ನು ವೇದಿಕೆಗೆ ಕರೆಯಲಾಯಿತು. 

ಪುರಸ್ಕೃತರನ್ನು ಒಬ್ಬೊಬ್ಬರನ್ನಾಗಿ ವೇದಿಕೆಗೆ ಕರೆದು, ಅವರಬಗ್ಗೆ, ಅವರ ಪುಸ್ತಕದ ಬಗ್ಗೆ, ನಾಲ್ಕೇ ನಾಲ್ಕು ಮಾತುಗಳನ್ನು ಹೇಳಿ ಪ್ರಶಸ್ತಿ ಪ್ರದಾನ ಮಾಡಿದ್ದಿದ್ದರೆ ಕೇವಲ ೩೦ ನಿಮಿಷಗಳಲ್ಲಿ ಮುಗಿದ ಈ ಕಾರ್ಯಕ್ರಮ, ೬೦ ನಿಮಿಷಗಳಲ್ಲಿ ಮುಗಿಯುತ್ತಿತ್ತು ಅಷ್ಟೆ. ವ್ಯವಸ್ಥಾಪಕರಿಗೆ ಇಷ್ಟೂ ಸಮಯ, ಸಂಯಮ ಇರಲಿಲ್ಲವೇ?

ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇಷ್ಟು ಅಸಂಸ್ಕೃತ, ಬೇಜವಾಬುದಾರಿತನದ ಕಾರ್ಯಕ್ರಮ ನಡೆಯಬಹುದೆಂದು ಕನಸಿನಲ್ಲೂ ಎಣಿಸಿರಲಿಲ್ಲ. 

ಗಾಯದಮೇಲೆ   ಉಪ್ಪು ಸವರಿದಂತೆ, ಒಂದು ಲಕೋಟೆಯಲ್ಲಿ ನಗದು ಹಣವನ್ನೂ ಕೊಟ್ಟರು. ಲಕೋಟೆಯ ಮೇಲೆ ವಿವಿಧ ಲೆಕ್ಕಗಳನ್ನು ಬರೆದು, ಅವನ್ನು ಹೊಡೆದುಹಾಕಿ, "ಬಹುಮಾನ, ೫೦೦ ರೂ" ಎಂದು ಬರೆಯಲಾಗಿತ್ತು. ಇದು ಪ್ರಶಸ್ತಿಯ ಮೊಬಲಗನ್ನು ಕೊಡುವ ರೀತಿಯೆ? ನೋಂದಾಯಿಸಿಲ್ಪಟ್ಟ ಸಂಸ್ಥೆಗಳು ಚೆಕ್ ಮೂಲಕ ಹಣ ನೀಡುವುದು ನಿಯಮವಲ್ಲವೆ? ಅಲ್ಲದೆ, ಇದು ಬಹುಮಾನವೋ ಪ್ರಶಸ್ತಿಯೋ?

ಇದು ಪ್ರಶಸ್ತಿಪ್ರದಾನ ಮಾಡುವ ರೀತಿಯೆ? ಇವೆಲ್ಲವೂ ಪ್ರಶಸ್ತಿವಿಜೇತರನ್ನು ಅವಮಾನಿಸಿದಂತಾಗಲಿಲ್ಲವೆ?

ಹಿಂದೆ ನಾವು ಪರಿಷತ್ತಿನಲ್ಲಿ ಕಂಡಂತಹ ಸಮಾರಂಭಗಳ ವೈಭವಯುತ ಚಿತ್ರ ಒಮ್ಮೆ ಕಣ್ಣಿನ ಮುಂದೆ ಹಾದುಹೋಗಿ, ಸಾಹಿತ್ಯ ಪರಿಷತ್ತಿನ ಇಂದಿನ ದುಃಸ್ಥಿತಿಯನ್ನು ಕಣ್ಣಾರೆ ಕಂಡು ಮನಸ್ಸಿಗೆ ಬಹಳ ನೋವಾಯಿತು. 


ಪ್ರಶಸ್ತಿ ವಿಜೇತರೊಬ್ಬರ ಮಗಳು ಹಾಗೂ ಮಗ. 


ವಿದ್ಯ ಶಂಕರ್ 
ಜೆ ಎಲ್ ಅನಿಲ್ ಕುಮಾರ್ 

Monday, September 16, 2013

ಸ್ವಾಮಿ




       ಗಡ್ಡ-ಮೀಸೆಗಳು, ತಲೆಗೂದಲೇ ಅಳತೆಯಾದರೆ
       ನೀನೊಬ್ಬ ಮಂದಮತಿಯೇ ಸರಿ.

       ಕಾವಿಚಾಟಿ, ನಾಮ, ಮುದ್ರೆ, ವಿಭೂತಿಗಳಾದರೆ
       ನೀನೊಬ್ಬ ಅಜ್ಞಾನಿಯಯೇ ಸರಿ. 

      ಕಣ್ಣರೆತೆರೆದು, ಅರ್ಥವಿರದ ಪದಗಳ ಹೆಣೆದು
      ಮಂಕುಮಾಡಲಾರದ ನೀ ಹುಂಬನೇ ಸರಿ.

      ಕಾಸಿಸಿದು ಪ್ರತಿನೀಡದ ಒಂದೇ ವ್ಯಾಪಾರದಿ 
      ತೊಡಗಲಾರದ ನೀ ಬಡವನೇ ಸರಿ

      ಚಿಂತಿಲ್ಲ! ಕಪಟಿಗಳನೆಲ್ಲ ಸಂದೇಹದಿ 
      ನೋಡುವ ನೀ ಬುದ್ಧನೇ ಸರಿಯೆಂದ ಓಮಾರ.


if you can not read the text above, please click on the image below



Friday, July 19, 2013

ಶಾಪ









ಅರ್ಥವಾಗದಿದ್ದರೂ ಹಳೆಗನ್ನಡವನೋದಿ ಆನಂದಿಸಿದ ತಪ್ಪಿಗೆ
ಕೈಲಾದಮಟ್ಟಿಗೆ ಕನ್ನಡವ ಓದಿ ಬರೆದ ತಪ್ಪಿಗೆ
ಬಲವಂತ ಮಾಘಸ್ನಾನವೆಂಬಂತೆ ದಿನವೂ ಬಸ್ಸಿನಲ್ಲಿ ಕನ್ನಡ ಸಿನಿಮಾ ಸಂಗೀತವ ಕೇಳುವಂತೆ ಶಾಪ ಕೊಟ್ಟನೇನೋ ಆ ಕ್ರೂರಿ!