೧೯೫೦ರ ದಶಕದ ಕೊನೆಯ ವರ್ಷಗಳಲ್ಲಿನ ಶಿವಮೊಗ್ಗೆ. ಇಲ್ಲಿಯ ಸರ್ಕಾರಿ ನೌಕರರ ವಸತಿಯ ಸಾಲುಮನೆಗಳಲ್ಲಿನ ಒಂದು ಮನೆಯಲ್ಲಿ ಸಹ್ಯಾದ್ರಿ ಕಾಲೇಜಿನಲ್ಲಿನ ಅಧ್ಯಾಪಕರೊಬ್ಬರು ಅವರ ಕುಟುಂಬದ್ದೊಂದಿಗೆ ವಾಸವಿದ್ದರು. ಅಲ್ಲಿನ ಇತರ ಮನೆಗಳಿಗಿಂತ ದೊಡ್ಡದಾಗಿದ್ದ ಆರು ಮನೆಗಳಲ್ಲೊಂದರಲ್ಲಿ ಅವರ ವಾಸ. ಅವರ ಮೇಲೆ ಅಲ್ಲಿನ ಜನರಿಗೆ ಬಹಳ ಮರ್ಯಾದೆ, ಗೌರವಗಳಿದ್ದವು. ಎಲ್ಲರೂ ಅವರನ್ನು ’ಮೇಷ್ಟ್ರು’ ಎಂದೇ ಗುರುತಿಸುತ್ತಿದ್ದರು.
ಮೇಷ್ಟ್ರು ಸ್ವತಃ ನಾಸ್ತಿಕರಾದರೂ, ಮಕ್ಕಳಿಗೆ ನಮ್ಮ ಸಂಸ್ಕೃತಿಯ ಬಗ್ಗೆ ತಿಳಿದಿರಬೇಕೆಂಬ ಉದ್ದೇಶದಿಂದ ಕೆಲವು ಹಬ್ಬಗಳನ್ನು ಮನೆಯಲ್ಲಿ ಆಚರಿಸುತ್ತಿದ್ದರು. ಹಬ್ಬದ ಪೂಜೆ ಪುನಸ್ಕಾರಗಳಿಗಿಂತ ಊಟಕ್ಕೇ ಪ್ರಾಧಾನ್ಯವಿತ್ತು ಎಂದರೂ ತಪ್ಪಿಲ್ಲವೆನ್ನಿ. ಅಂತಹ ಹಬ್ಬಗಳಲ್ಲಿ ಗಣೇಶನ ಹಬ್ಬವೂ ಒಂದು. ಆ ವಸತಿಗಳಲ್ಲಿ ಇರುತ್ತಿದ್ದ ಜೋಯಿಸ್ ಎಂಬಾತ ಮೇಷ್ಟರ ಮನೆಯಲ್ಲಿ ಹಬ್ಬದ ಪೂಜೆ ಮಾಡಿಸುವ ಜವಾಬ್ದಾರಿಯನ್ನು ತಾವೇ ಹೊತ್ತು, ಹಬ್ಬದ ದಿನ ಮೊದಲ ಪೂಜೆ ಮೇಷ್ಟರ ಮನೆಯಲ್ಲಿ ಮಾಡಿಸಿದ ನಂತರ ಇತರ ಮನೆಗಳಲ್ಲಿ ಪೂಜೆ ಮಾಡಿಸುವ ಪರಿಪಾಠವಿಟ್ಟುಕೊಂಡಿದ್ದರು.
ಹಬ್ಬದ ದಿನ ಹತ್ತಾರು ಗುಂಪುಗಳಲ್ಲಿ ಹುಡುಗರು ಬಂದು, ಗಣಪತಿಯ ದರ್ಶನ ಮಾಡಿ ಜೈಕಾರ ಹಾಕಿ ಹೋಗುತ್ತಿದ್ದರು. ಎಲ್ಲ ಮನೆಗಳಲ್ಲಿ ಸಂಭ್ರಮವೋ ಸಂಭ್ರಮ. ಹಬ್ಬದ ನಂತರದ ಒಂದು ದಿನವನ್ನು ಆ ಜೋಯಿಸರೇ ನಿರ್ಧರಿಸಿ, ಮೇಷ್ಟರ ಕೈಯಿಂದ ಗಣಪತಿಯ ವಿಸರ್ಜನೆಯನ್ನೂ ಮಾಡಿಸುತ್ತಿದ್ದರು. ಆ ವಸತಿಗಳಲ್ಲಿ ವಾಸವಿದ್ದ ಕೆಲವರು, ಅವರ ಮನೆಯಲ್ಲಿನ ಮಕ್ಕಳು, ಮೇಷ್ಟರ ಸ್ನೇಹಿತರು, ಬಂಧುಗಳು ಆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ಹತ್ತಿರದಲ್ಲೇ ಇದ್ದ ಒಂದು ಭಾವಿಯಲ್ಲಿ ಗಣಪತಿಯ ವಿಸರ್ಜನೆಯಾಗುತ್ತಿತ್ತು. ಮೇಷ್ಟರು ತಟ್ಟೆಯಲ್ಲಿ ಗಣಪತಿಯ ವಿಗ್ರಹವನ್ನಿಟ್ಟುಕೊಂಡು ಹೊರಟಾಗ ಇತರರು ಅವರ ಹಿಂದೆ ಭಾವಿಗೆ ಸಾಗುತ್ತಿದ್ದರು.
ಒಂದು ಬಾರಿ ಗಣೇಶನ ವಿಸರ್ಜನೆಯಲ್ಲಿ ಒಂದು ಘಟನೆ ನಡೆಯಿತು. ಆ ಬಾರಿ, ಗಣಪತಿಯ ವಿಗ್ರಹದ ಕಿರೀಟದ ಮೇಲೆ, ತುತ್ತ ತುದಿಯಲ್ಲಿ, ಒಂದು ಸುಂದರ ರೋಜಾ ಹೂವನ್ನು ಸಿಕ್ಕಿಸಿ ಅಲಂಕಾರ ಮಾಡಿದ್ದರು ಮೇಷ್ಟರ ಪತ್ನಿ ಶಾಂತಮ್ಮನವರು. ಮೇಷ್ಟ್ರು ಭಾವಿಯನ್ನು ತಲುಪಿದಂತೆಯೇ, ಜೋಯಿಸರು ಗಣಪತಿಗೆ ಮಂಗಳಾರತಿ ಮಾಡಿದರು. ಮೇಷ್ಟ್ರು ಗಣಪನ ವಿಗ್ರಹವನ್ನು ಅದನ್ನಿಟ್ಟಿದ್ದ ತಟ್ಟೆಯಿಂದ ಹೊರತೆಗೆದು, ಭಾವಿಯ ಕಟ್ಟೆಗೆ ಒರಗಿ ನಿಂತು ವಿಗ್ರಹವು ಭಾವಿಯ ಬಾಯಿಯ ಮಧ್ಯಕ್ಕೆ ಇರುವಂತೆ ಎರಡೂ ಕೈಚಾಚಿ ನಿಂತರು. ಜೋಯಿಸರು ಇನ್ನಷ್ಟು ಮಂತ್ರಗಳನ್ನು ಹೇಳಿ, "ಇನ್ನು ಬಿಡಿ" ಅಂದರು. ಮೇಷ್ಟ್ರು ವಿಗ್ರಹವನ್ನು ಬಿಟ್ಟರು. ಅದು ನೇರವಾಗಿ ಬಿತ್ತು. ಬಿದ್ದ ಶಬ್ದ ಕೇಳಿಸಿತು.
ಮೇಷ್ಟರ ಕೈ ಇನ್ನೂ ಅಲ್ಲೇ ಇತ್ತು. ಎಲ್ಲರೂ ನೋಡುತ್ತಿದ್ದಂತೆ, ವಿಗ್ರಹದ ಮೇಲೆ ಸಿಕ್ಕಿಸಿದ್ದ ಕೆಂಪು ರೋಜಾ ಹೂವು ಭಾವಿಯ ಆಳದಿಂದ ನೆಟ್ಟಗೆ ಮೇಲಕ್ಕೆ ಬಂತು. ಮಂಗಳಾರತಿಯ ಮಂದ ಬೆಳಕಿನಲ್ಲೂ ಅದು ಮೇಷ್ಟರಿಗೆ ಕಂಡು ಅವರು ಅದನ್ನು ಹಿಡಿದುಕೊಂಡರು. ನೆರೆದಿದ್ದ ಜನರೆಲ್ಲ ಆಶ್ಚರ್ಯದಿಂದ ಪುಳಕಿತರಾಗಿ ಅದು ಒಂದು ಪವಾಡವೇ ಎಂದು ಭಾವಿಸಿದರು! ಜೋಯಿಸರಂತೂ ಅತ್ಯಂತ ಭಯ ಭಕ್ತಿಗಳಿಂದ, "ಇದು ಆ ಗಣೇಶನ ಅನುಗ್ರಹ! ಪ್ರಸಾದ!! ಇದನ್ನು ಶಾಂತಮ್ಮನವರೇ ಮುಡಿದುಕೊಳ್ಳಬೇಕು ಎಂದು ತಾಕೀತು ಮಾಡಿದರು. ಮೇಷ್ಟರಿಗೆ ನಗು. ಸರಿ, ಜೋಯಿಸರು ಹೇಳಿದಂತೆಯೇ ಶಾಂತಮ್ಮನವರು, ಅದನ್ನು ತಮ್ಮ ಕೊಂಡೆಗೆ ಮುಡಿದುಕೊಂಡರು. ಅಲ್ಲಿ ನೆರೆದಿದ್ದವರೆಲ್ಲ ಅದೇ ವಿಷಯವನ್ನು ವಿಸ್ಮಯದಿಂದ ಮಾತಾಡಿಕೊಳ್ಳುತ್ತಾ ಹಿಂದಿರುಗಿದರು.
ಮಾರನೆಯ ಮುಂಜಾನೆ ಕಂಡ ದೃಷ್ಯ ಹೀಗಿತ್ತು: ಹಿಂದಿನ ರಾತ್ರಿಯ ಘಟನೆಯನ್ನು ಕೇಳಿ, ಅದು ಪವಾಡವೆಂದು ನಂಬಿ, ಅದರ ಬಗ್ಗೆ ಮೇಷ್ಟರನ್ನು ಅಭಿನಂದಿಸಲು ಯಾರೋ ಬಂದಿದ್ದರು. ಅದು ಪವಾ್ಡವಲ್ಲ, ಅದಕ್ಕೆ ಸಾಧಾರಣ ಭೌತಿಕ ಕಾರಣಗಳಿದ್ದು, ಪ್ರಾಥಮಿಕ ಭೌತಶಾಸ್ತ್ರದ ಸಹಾಯದಿಂದ ಅದನ್ನು ವಿವರಿಸಬಹುದು. ವಿಗ್ರಹವು ನೀರನ್ನು ಭೇದಿಸಿ ವೇಗವಾಗಿ ಒಳಹೋದಮೇಲೆ ಸುತ್ತಲಿನ ನೀರು ವಿಗ್ರಹವು ತೆರವು ಮಾಡಿದ ಜಾಗವನ್ನು ಮತ್ತೆ ತುಂಬಲು ಹೇಗೆ ರಭಸವಾಗಿ ನುಗ್ಗಿರಬೇಕು. ವಿಗ್ರಹದ ತುದಿಯಲ್ಲಿದ್ದ ಹಗುರವಾದ ಹೂವನ್ನು ಒಳನುಗ್ಗುವ ನೀರು ಹೇಗೆ ತಳ್ಳಿರಬೇಕು. ಅದು ಹೂವು ನೆಟ್ಟಗೆ ಮೇಲೆ ಬರುವಂತೆ ಹೇಗೆ ಮಾಡಿರಬೇಕು. ಇದು ಪವಾಡವಲ್ಲ, ಕೇವಲ ಅಸಾಮಾನ್ಯ ಆಕಸ್ಮಿಕ ಘಟನೆ, ಎಂಬ ವಿವರಣೆ ಮೇಷ್ಟರಿಂದ ನಡೆಯುತ್ತಿತ್ತು.