Friday, March 21, 2025

ಜಗಲೂರಿನ ವಡ್ಡರ ತಿಮ್ಮ



ನಾನು ಮೊದಲ ಬಾರಿ "ನಮ್ಮೂರಿಗೆ" ಹೋದದ್ದು ನನ್ನ ಇಪ್ಪತ್ತನೆಯ ವಯಸ್ಸಿನಲ್ಲಿ. ಅದು ನಮ್ಮ ತಂದೆಯವರ ಊರು - ಜಗಲೂರು. ಆ ಊರಿನ ಮತ್ತು  ಅಲ್ಲಿನ ವ್ಯಕ್ತಿಗಳ ಕತೆಗಳನ್ನು ನಮ್ಮ ತಂದೆ (ನಾವು ಅವರನ್ನು ಅಣ್ಣ ಎಂದು ಕರೆಯುತ್ತಿದ್ದೆವು. ಇನ್ನು ಮುಂದೆ ಅಣ್ಣ ಎಂದೇ ಹೇಳುತ್ತೇನೆ) ಬಹಳ ಸ್ವಾರಸ್ಯಕರವಾಗಿ ಅಗಾಗ್ಗೆ ಹೇಳುತ್ತಿದ್ದುದರಿಂದ ಅದರ ಚಿತ್ರವೊಂದು ನನ್ನ ಮನಸಿನಲ್ಲಿ ಮೂಡಿ ಬಿಟ್ಟಿತ್ತು. ಅಲ್ಲದೆ ಅದು ನಮ್ಮ ಊರು ಅನ್ನುವ ಭಾವನೆ ಬೆಳೆದು ಬಿಟ್ಟಿತ್ತು. ಈಗ ಯೋಚಿಸಿದರೆ ನನಗೇ ಅದು ಹಾಸ್ಯಾಸ್ಪದ ಎನಿಸುತ್ತದೆ.  ಇದನ್ನು ಓದುತ್ತಿರುವ ನಿಮಗೆ ಅದು ಹಾಸ್ಯಾಸ್ಪದ ಎನಿಸಿದರೆ ನನ್ನದೇನೂ ತಗಾದೆ ಇಲ್ಲ.

ಜಗಲೂರಿಗೆ ಹೋಗಿ, ಅಣ್ಣನ ಮನೆ, ಮನೆಯಿದ್ದ ರಸ್ತೆ, ಕೆರೆ, ರಾಮಮಂದಿರ, "ಸೀನೀರ್ಬಾವಿ" ಇವುಗಳನ್ನೆಲ್ಲ ನೋಡುತ್ತಿದ್ದರೆ ಅವು ಸಂಪೂರ್ಣ ಹೊಸದೂ,  ಚಿರಪರಿಚಿತವೂ ಎನಿಸಿದ್ದವು. ಆಲ್ಲಿದ್ದಾಗಿನ ಘಟನೆಗಳಲ್ಲಿ ಕೆಲವು ಇನ್ನೂ ಹಚ್ಚ ಹಸಿರಾಗಿ ನನ್ನ ಮನಸ್ಸಿನಲ್ಲಿ ಉಳಿದಿವೆ - ಸುಮಾರು ಐವತ್ತು ವರ್ಷಗಳ ನಂತರವೂ ಸಹ. ಅವುಗಳಲ್ಲಿ ಕೆಲವನ್ನು ಹಂಚಿಕೊಳ್ಳುವ ಪ್ರಯತ್ನ ಇದು.

ಅಣ್ಣನ ಪ್ರೀತಿಪಾತ್ರ ಚಿಕ್ಕಪ್ಪನವರೂ, ವಿದ್ಯಾಗುರುಗಳೂ ಆದ "ರಾಘ್ಕಕ್ಕ" ಆಗ ಇನ್ನೂ ಅಲ್ಲಿದ್ದರು. ಅವರು ನಮ್ಮ ತಾತನ ಸೋದರಸಂಬಂಧಿ. ರಾಘ್ಕಕ್ಕ ಆವರನ್ನು ಎಂದೂ ಕಾಣದೆಯೇ ಅವರ ಬಗ್ಗೆ ನನಗೆ ಬಹಳ ಗೌರವವಿತ್ತು. ಜಗಲೂರಿನ ಶಾಲೆಯಲ್ಲಿ ಅವರು ಮೇಷ್ಟ್ರಾಗಿದ್ದು ಅಣ್ಣನಿಗೆ ಪಾಠ ಹೇಳಿದ್ದರು.  ಅಣ್ಣನ ಪ್ರಕಾರ ಅಣ್ಣ ಒಳ್ಳೆಯ ಇಂಗ್ಲಿಷ್ ಕಲಿತಿದ್ದಕ್ಕೆ ರಾಘ್ಕಕ್ಕನವರೇ ಕಾರಣ.  ನಮ್ಮ ತಾತನವರಿಗೇ ಅಣ್ಣನ ಮೇಲೆ ಸಕಾರಣದಿಂದ ವಿಶ್ವಾಸ ಕಳೆದು ಹೋಗಿದ್ದ ಕಾಲದಲ್ಲಿ ರಾಘ್ಕಕ್ಕ ವಿಶ್ವಾಸವಿಟ್ಟು ಇವನು ಬುದ್ಧಿವಂತ, ಮುಂದೆ ಉದ್ಧಾರವಾಗುತ್ತಾನೆ ಎಂಬ ಭರವಸೆ ಇಟ್ಟುಕೊಂಡು, ಅಣ್ಣನ ವಿದ್ಯಾಭ್ಯಾಸ ಮುಂದುವರಿಯಬೇಕೆಂದು ನಮ್ಮ ತಾತನವರ ಮೇಲೆ ಒತ್ತಾಯ ಮಾಡಿ ತಂದೆಯವರ ಭವಿಷ್ಯವನ್ನು ಕಾಪಾಡಿದವರು ಅವರು.

ರಾಘ್ಕಕ್ಕನವರ ಜೊತೆ, ಸಂಜೆ ರಾಮಮಂದಿರಕ್ಕೆ ಹೋಗಿದ್ದೆ.  ಎಲ್ಲ ರಾಮಮಂದಿರಗಳಂತೆ ಅದೂ ನಿರಾಡಂಬರವಾಗಿತ್ತು. ಅದರ ಆಡಳಿತದ ಜವಾಬ್ದಾರಿ ಹೊತ್ತವರಲ್ಲಿ, ರಾಘ್ಕಕ್ಕನವರೂ ಒಬ್ಬರು. ರಾಮಮಂದಿರದಲ್ಲಿದ್ದ ಒಂದು ಟ್ಯೂಬ್ ಲೈಟ್ ಕೆಲಸಮಾಡುತ್ತಿರಲಿಲ್ಲ. ಯಾರೋ ಅಲ್ಪ ಸ್ವಲ್ಪ ತಿಳಿದವರು ಅದರ ಸ್ಟಾರ್ಟರ್ ಹೋಗಿದೆ, ಬೇರೆ ಹಾಕಿದರೆ ಕೆಲಸ ಮಾಡಬಹುದು ಅಂದಿದ್ದರಂತೆ. ಯಾರೋ ಒಂದು ಸ್ಟಾರ್ಟರ್ ತರಿಸಿಯೂ ಇಟ್ಟಿದ್ದರು. ಆದರೆ ಎತ್ತರದ ಸ್ಟೂಲ್ ಹತ್ತಿ ಹೊಸ ಸ್ಟಾರ್ಟರ್ ಹಾಕುವ ಸಾಮರ್ಥ್ಯ ಅಲ್ಲಿದ್ದ ಹಿರಿಯರಿಗ್ಯಾರಿಗೂ ಇರಲಿಲ್ಲವಾಗಿ, ಊರಿನ ಎಲೆಕ್ಟ್ರೀಷಿಯನ್ನುಗಳಿಗೆ ಇದು ತೀರ ಚಿಲ್ಲರೆ ಕೆಲಸವಾಗಿದ್ದು ಯಾರೂ ಅತ್ತ ಸುಳಿದಿರಲಿಲ್ಲ. ಅದು ವಾರಗಟ್ಟಲೆ ಹಾಗೇ ಉಳಿದಿತ್ತು.

ರಾಘ್ಕಕ್ಕ "ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಓದ್ತಿದ್ದೀಯ. ಈ ಸ್ಟಾರ್ಟರ್ ಬದಲಾಯಿಸಕ್ಕೆ ಬರುತ್ತೋ?" ಎಂದು ನನ್ನನು ಬಹಳ ಸಂಕೋಚದಿಂದ ಕೇಳಿದರು! ನನಗೆ ಅ ಹಿರಿಯರ ಸಂಕೋಚ ನೋಡಿ ಅಯ್ಯೋ ಅನಿಸಿತು. ಸ್ಟೂಲ್ ತಂದು, ಮೇಲೆ ಹತ್ತಿ ಸ್ಟಾರ್ಟರ್ ಬದಲಾಯಿಸಿದೆ. ದೀಪ ಹತ್ತಿತು. ಅವರಿಗೂ. ರಾಮಮಂದಿರದ ಅರ್ಚಕರಿಗೂ ಆದ ಸಂತೋಷ ಹೇಳತೀರದು. ಅವರಿಬ್ಬರೂ ನನ್ನ ಮೇಲೆ ಅವರ ಮತ್ತು ರಾಮನ ಆಶೀರ್ವಾದಗಳನ್ನು ಯಥೇಚ್ಚವಾಗಿ ಸುರಿದರು. ಈಗಲೂ ಅವರ ಅಸಹಾಯಕತೆ ಅಮಾಯಕತೆಗಳನ್ನು ನೆನೆಸಿಕೊಂಡರೆ ಛೇ ಅನ್ನಿಸುತ್ತದೆ.

ಎರಡನೆಯದು, ಅಣ್ಣನ ಅಪ್ತಮಿತ್ರರಾಗಿದ್ದ ಶ್ರೀ ಫ಼ಕೀರ್ ಸಾಹೇಬರ ತಂದೆ ಶ್ರೀ ಕಾಸಿಮ್ ಸಾಹೇಬರ ಮನೆಗೆ ನಾನು ಮತ್ತು ನನ್ನಕ್ಕ ಹೋಗಿ ಅವರನ್ನು ಕಂಡದ್ದು.  ಆಗ ಸಾಹೇಬರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಆವರೊಡನೆ ಒಂದರ್ಧ ಘಂಟೆ ಮಾತನಾಡಿದೆವು. ಅವರ ಮಾತಿನಲ್ಲಿ ಅವರಿಗೆ ಅಣ್ಣನ ಮೇಲಿದ್ದ ಪ್ರೀತಿ, ಅಭಿಮಾನಗಳು ಎದ್ದು ಕಾಣುತ್ತಿದ್ದವು. ನಾವು ಅವರ ಮನೆಯಿಂದ ಹೊರಟಾಗ ಅವರ ಸೊಸೆ ಒಳಗೆ ಹೋಗಿ, ಒಂದು ತಟ್ಟೆಯಲ್ಲಿ ಕುಂಕುಮ, ಎಲೆ ಅಡಿಕೆ, ತೆಂಗಿನಕಾಯಿಗಳನ್ನು ತಂದು, ಅಕ್ಕನ ಹಣೆಗೆ ಕುಂಕುಮ ಇಟ್ಟು, ಎಲೆ ಅಡಿಕೆ, ತೆಂಗಿನಕಾಯಿ ಕೊಟ್ಟು ಕಳಿಸಿದ್ದು ಕಣ್ಣಿಗೆ ಕಟ್ಟಿದಂತಿದೆ.

ಮೂರನೆಯದು ಇದು. ಜಗಲೂರಿನಲ್ಲಿ ನಾವು ತಂಗಿದ್ದು ಅಣ್ಣನ ಸೋದರ ಸಂಬಂಧಿ ಜಗಲೂರು ರಾಮಚಂದ್ರ ಅವರ ಮನೆಯಲ್ಲಿ.  ನಾವು ಅವರನ್ನು ದೊಡ್ಡಪ್ಪ ಎಂದು ಕರೆಯುತ್ತಿದ್ದೆವು. ಅಕ್ಕ, ನಾನು ಚಿತ್ರದುರ್ಗಕ್ಕೋ ಇನ್ನೆಲ್ಲಿಗೋ ಹೋಗಿ ಜಗಲೂರಿಗೆ ಹಿಂದಿರುಗಿದಾಗ ಸಂಜೆ ಸುಮಾರು ಏಳರ ಸಮಯ.  ಮಬ್ಬುಗತ್ತಲು. ಅವರ ಮನೆಯ ಮುಂದೆ ಚರಂಡಿಯ ಪಕ್ಕದಲ್ಲಿ ಹಣ್ಣು ಹಣ್ಣು ಮುದುಕನೊಬ್ಬ ಕುಕ್ಕರುಗಾಲಿನಲ್ಲಿ ಕುಳಿತಿದ್ದ. ನಾವು ಬಂದಕೂಡಲೆ ದೊಡ್ಡಪ್ಪ,  "ತಿಮ್ಮನ್ನ ಕರ್ಸಿದೀನಿ" ಅಂದರು. ಅಣ್ಣ ತಿಮ್ಮನ ಕುರಿತ ಅನೇಕ ಪ್ರಸಂಗಗಳನ್ನು ನಮಗೆ ಅಗಾಗ್ಗೆ ಹೇಳಿದ್ದಿದ್ದರಿಂದ ಆತ ನಮಗೆ ಪರಿಚಯವಾಗಿದ್ದ. ಆದ್ದರಿಂದ ಆತನನ್ನು ಕಂಡಿದ್ದು ನಮಗೆ ಅತ್ಯಂತ ಸಂತೋಷದ ವಿಷಯ  ಮತ್ತು ಆಶ್ಚರ್ಯ ಕೂಡ.  ನಮ್ಮ ತಾತನವರಾದ ಜಗಲೂರು ರಾಘವೇಂದ್ರ ರಾಯರ ಮನೆಯಲ್ಲಿ ಕೆಲಸಕ್ಕಿದ್ದ ಆಳು, ತಿಮ್ಮ. ವಡ್ಡರ* ತಿಮ್ಮ ಅಥವ ಒಡ್ಡರ ತಿಮ್ಮ ಎಂದು ಅವನ ಪರಿಚಯ. ನಮ್ಮ ತಾತನವರ ಆಪ್ತ ಕೆಲಸಗಾರ. ಅವನ ವಯಸ್ಸು ಎಷ್ಟೋ ಅವನಿಗೇ ಗೊತ್ತಿರಲಿಲ್ಲ. **

ತಾತ ಊರಿನ ಮುಖ್ಯಸ್ಥರಲ್ಲೊಬ್ಬ್ಬರು. ಅವರಿಗೆ "The uncrowned king of Jagalur" ಎನ್ನುವ ಅನಧಿಕೃತ ಉತ್ಪ್ರೇಕ್ಷಿತ ಬಿರುದೂ ಇತ್ತೆಂದು ಪ್ರತೀತಿ. ಅವರಿಗೆ ಪಾರಂಪರಿಕವಾಗಿ ಯಾವುದೋ ಹಳ್ಳಿಯ ಶ್ಯಾನುಭೋಗಿಕೆ (ಹಳ್ಳಿಯ ಲೆಕ್ಖಪತ್ರ ಇಡುವ ಕೆಲಸ) ಇದ್ದರೂ ಅದನ್ನು ಬಿಟ್ಟು ಜಗಲೂರಿನಲ್ಲಿದ್ದರು. ಅವರ ಮನೆಯ ಜಗಲಿಯೇ ಅವರ ಕೆಲಸದ ಸ್ಥಳ. ಆಗಿನಿಂದಲೇ work from home! ವೃತ್ತಿಯಲ್ಲಿ ಅವರನ್ನು ಫೂಟ್ಲಾಯರಿ ಅನ್ನಬಹುದು. ಅಂದರೆ ಪದವೀಧರರಲ್ಲದ ವಕೀಲರು. ಜಮೀನು ಮಾರಾಟದ ಪತ್ರ, ಸಾಲದ ಪತ್ರ ಇವುಗಳನ್ನು ಬರೆದು ಕೊಡುವುದು, ಆಸ್ತಿ ವಿಭಜನೆ ಮಾಡಿಕೊಡುವುದು ಇತ್ಯಾದಿ ಅವರ ಆದಾಯದ ಮೂಲ. ಇದರಲ್ಲಿ ಬಹಳ ಒಳ್ಳೆಯ ಹೆಸರು ಮಾಡಿ ಜನಮನ್ನಣೆಗೆ ಪಾತ್ರರಾದವರು ತಾತ. ಪ್ರತಿದಿನ ಬೆಳಿಗ್ಗೆ ಮನೆಯ ಜಗಲಿಯ ಒಪ್ಪ ಓರಣ, ಜಮಖಾನೆ ಹಾಸಿ, ತಾತ ಕುಳಿತುಕೊಳ್ಳಲು, ಒರಗಿಕೊಳ್ಳಲು, ದಿಂಬುಗಳನ್ನಿಟ್ಟು, ಅವರ ಡೆಸ್ಕ್ ಇಟ್ಟು, ಮಸಿ ಕುಪ್ಪಿಗೆ ಮಸಿ ತುಂಬಿಸಿ ಇಟ್ಟು ಇತ್ಯಾದಿ ಕೆಲಸಗಳಿಂದ ಪ್ರಾರಂಭವಾದ ತಿಮ್ಮನ ದಿನ, ರಾತ್ರಿ ಕಂದೀಲು, ಬುಡ್ಡಿ ದೀಪಗಳನ್ನೆಲ್ಲ ಒರೆಸಿ, ಕಲ್ಲೆಣ್ಣೆ ತುಂಬಿ, ದೀಪ ಬೆಳಗಿಸುವುದರಿಂದ ಮುಗಿಯುತ್ತಿತ್ತು.

ಆ ವಯೋವೃದ್ಧ ತಿಮ್ಮನನ್ನು ನಾವು ನೋಡಬೇಕು ಎಂದು ದೊಡ್ಡಪ್ಪ ಅವನಿಗೆ ಬರಹೇಳಿದ್ದರು. ಎತ್ತಿನ ಗಾಡಿ ಕಟ್ಟಿಕೊಂಡು ಆ ಪಾಪದ ಮುದುಕ ಬಂದು ನಮಗೆ ಕಾಯುತ್ತಾ ಕುಳಿತಿದ್ದ! ಅದನ್ನು ಕೇಳಿ ಹೊಟ್ಟೆ ಕಿವಿಚಿದಂತಾಯ್ತು. ನಾವು ಆತನನ್ನು ನೋಡಿದ ಮೇಲೆ ಆತ ಎಂಟು ಹತ್ತು ಕಿಲೋಮೀಟರ್ ದೂರದ ಅವನ ಊರಿಗೆ ಹಿಂತಿರುಗಬೇಕು ! ಎಂಥ ಕ್ರೌರ್ಯ ಎನಿಸಿತು. ಅಷ್ಟೇ ಸಾಲದು ಅನ್ನುವಂತೆ, ದೊಡ್ಡಪ್ಪ ಎತ್ತರದ ಧ್ವನಿಯಲ್ಲಿ ತಿಮ್ಮನನ್ನು ಕೇಳಿದರು - ಕಿವಿ ಸರಿಯಾಗ್ಗಿ ಕೇಳಿಸದ ತಿಮ್ಮನಿಗೆ ಕೇಳಲಿ ಎಂದು - "ಇವರು ಯಾರು ಗೊತ್ತೇನು?" ಆತ ಇಲ್ಲ ಎನ್ನುವಂತೆ ತಲೆ ಅಲ್ಲಾಡಿಸಿದ. "ರಾಘಣ್ಣನ ಮೊಮ್ಮಕ್ಕಳು, ಅಚ್ಚಣ್ಣನ ಮಕ್ಕಳು." ಅಂದರು ದೊಡ್ಡಪ್ಪ. (ಆಚ್ಚಣ್ಣ, ಅಣ್ಣನನ್ನು ಎಲ್ಲರೂ ಕರೆಯುತ್ತಿದ್ದ ಹೆಸರು. ಲಕ್ಶ್ಮಣ ಹೋಗಿ ಅಚ್ಚಣ್ಣ ಆಗಿತ್ತು. ಕಿರಿಯರಿಗೆಲ್ಲ ಅಣ್ಣ ಅಚ್ಚುಮಾವ ಆಗಿದ್ದರು.) ಆ ಮುದುಕನನ್ನು ನಿಷ್ಕರುಣೆಯಿಂದ ಬರಹೇಳಿದ್ದರಿಂದ ಚಡಪಡಿಸುತ್ತಿದ್ದ ನಮಗೆ ಇನ್ನೊಂದು ಆಘಾತ ಕಾದಿತ್ತು. ಕೂತಲ್ಲಿಂದ ಎದ್ದು ಬಂದ ತಿಮ್ಮ, ದೂಳು ರಸ್ತೆಯನ್ನೂ ಲೆಕ್ಕಿಸದೆ ನಮ್ಮ ಕಾಲು ಮುಟ್ಟಿ ನಮಸ್ಕಾರ ಮಾಡಿ ಬಿಟ್ಟ.

ತಾತನ ಮೇಲಿದ್ದ ಮರ್ಯಾದೆಯೋ, ಅಣ್ಣನ ಮೇಲಿದ್ದ ಪ್ರೀತಿಯೋ, ತಲೆತಲಾಂತರದಿಂದ ಮೇಲು - ಕೀಳು ಭಾವನೆಯೋ ಅವೆಲ್ಲದರ ಕಲಸುಮೇಲೋಗರವೋ ಗೊತ್ತಿಲ್ಲ, ನಮ್ಮ ತಾತನ ವಯಸ್ಸಿನ ಮುದುಕ ನಮ್ಮ ಕಾಲು ಮುಟ್ಟಿದ್ದ.

ಈಗಲೂ ಅದನ್ನು ನೆನೆಸಿಕೊಂಡರೆ ಅತೀವ ವೇದನೆಯಾಗಿ ಕಣ್ಣು ತೇವವಾಗುತ್ತವೆ,


*ಶ್ರೀ ವಿ ಕೃಷ್ಣ ವಿರಚಿತ ಅಲರ್ ನಿಘಂಟು (https://alar.ink/) ವಡ್ಡ ಎನ್ನುವ ಪದಕ್ಕೆ ಈ ಅರ್ಥ ನೀಡುತ್ತದೆ
 
ವಡ್ಡ
  1. a class of persons engaged in cutting stone, road-work, digging tanks etc.
  2. a member of this class.
 
**ಅಣ್ಣನ ಬಾಲ್ಯದಲ್ಲಿ ಯಾರೋ ಮುದುಕನನ್ನ ನಿನ್ನ ವಯಸ್ಸೆಷ್ಟು ಎಂದು ಕೇಳಿದ್ದರಂತೆ. ಅವನ ಉತ್ತರ, "ನಂಗೊತ್ತಿಲ್ಲ. ಆದರೆ ದಂಗೆ ಆದಾಗ ಆಗ್ತಾನೆ ಬೀಡಿ ಸೇದಕ್ಕೆ ಷುರು ಮಾಡೋ ವಯಸ್ಸು".  ದಂಗೆ ಎಂದರೆ ಮೊದಲನೆ ಸ್ವಾತಂತ್ರ ಸಂಗ್ರಾಮ - 1857. ಬೀಡಿ ಸೇದಕ್ಕೆ ಷುರು ಮಾ



No comments: